

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದಾ ಟ್ರೋಲ್ ಪುಟದಲ್ಲಿ ಟಾಪ್-1ನಲ್ಲಿಯೇ ಇರುತ್ತಿದ್ದಾರೆ. ಇವರು ಹೋದಲ್ಲಿ, ಬಂದಲ್ಲಿ ಮಾಡುವ ಭಾಷಣಗಳ ತುಣುಕುಗಳು ಸದಾ ಹಾಸ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ.
ಇವರು ಟ್ರೋಲ್ ಆಗುತ್ತಿರುವ ಭಾಷಣಗಳ ಪೈಕಿ ಹಲವಾರು ಭಾಷಣಗಳು ಅಥವಾ ದೃಶ್ಯಗಳು ನಿಜವಾಗಿಯೂ ರಾಹುಲ್ ಗಾಂಧಿಯವರದ್ದೇ ಆಗಿದ್ದರೂ, ಕೆಲವೊಮ್ಮೆ ಯಾವುದೋ ಸನ್ನಿವೇಶಕ್ಕೆ ಇನ್ನೇನೋ ಕಲ್ಪನೆ ಮಾಡಿಕೊಂಡು ಟ್ರೋಲ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.
ಇತ್ತೀಚೆಗೆ ರಾಹುಲ್ ಗಾಂಧಿಯವರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ಧವಾಗಿ 'ಖೇತಿ ಕಾ ಕೂನ್' ಪುಸ್ತಕ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದ ವೇಳೆ, ಮಾಧ್ಯಮದ ಫೋಟೋಗ್ರಾಫರ್ ಒಬ್ಬರು ಪುಸ್ತಕದ ಹಿಂಭಾಗವನ್ನು ತೋರಿಸಿ ಎಂದರು. ಆಗ ರಾಹುಲ್ ಗಾಂಧಿಯವರಿಗೆ ಅದು ತಿಳಿಯದೇ ತಾವೇ ಹಿಂದಕ್ಕೆ ತಿರುಗಿ ಬೆನ್ನು ತೋರಿಸಿದರು ಎಂದು ಜಾಲತಾಣದಲ್ಲಿ ಸುದ್ದಿಯಾಗಿದೆ.
'ಪುಸ್ತಕದ ಬೆನ್ನು ತೋರಿಸಿ ಎಂದರೆ ತಮ್ಮದೇ ಬೆನ್ನು ತೋರಿಸಿದರು' ಎಂಬ ಶೀರ್ಷಿಕೆಯ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗುತ್ತಿದೆ ವಿಡಿಯೋ ಒಂದು.
ಆದರೆ ಅದನ್ನು ಫ್ಯಾಕ್ಟ್ ಚೆಕ್ ತಂಡವೊಂದು ಫ್ಯಾಕ್ಟ್ ಚೆಕ್ ಮಾಡಿದ್ದು, ನಿಜವಾಗಿಯೂ ರಾಹುಲ್ ಗಾಂಧಿಯವರು ಹೀಗೆಯೇ ಮಾಡಿದ್ರಾ ಎಂದು ಪರಿಶೀಲನೆ ಮಾಡಿದೆ. ಆದರೆ ಫ್ಯಾಕ್ಟ್ ಚೆಕ್ ತಂಡ ಹೇಳಿರುವ ಪ್ರಕಾರ, ರಾಹುಲ್ ಗಾಂಧಿಯವರ ಬಗ್ಗೆ ಹೀಗೆ ಹರಿದಾಡುತ್ತಿರುವ ಸುದ್ದಿ ಫೇಕ್ನ್ಯೂಸ್. ನಿಜವಾದದ್ದು ಏನೆಂದರೆ, ಕೃಷಿಯ ಬಗ್ಗೆ ಕೇಂದ್ರ ಸರ್ಕಾರ ತಿರಸ್ಕಾರದ ಮನೋಭಾವ ಹೊಂದಿದೆ ಎಂದು ಹೇಳುವುದನ್ನು ಆ್ಯಕ್ಷನ್ ಮೂಲಕ ತೋರಿಸಿರುವ ರಾಹುಲ್ ಗಾಂಧಿಯವರು ಕೃಷಿಯ ಬಗ್ಗೆ ಹೀಗೆ ಕೇಂದ್ರ ಸರ್ಕಾರ ಬೆನ್ನುಹಾಗಿದೆ ಎಂದು ತೋರಿಸಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಬೆನ್ನನ್ನು ತೋರಿಸಿದ್ದಾರೆ. ಆದರೆ ಇದರ ವಿಡಿಯೋವನ್ನು ಪ್ರಸಾರ ಮಾಡಿ ತಪ್ಪು ತಪ್ಪು ಸುದ್ದಿ ಹರಡಲಾಗುತ್ತಿದೆ ಎಂದು ಈ ತಂಡ ಹೇಳಿದೆ.
ಪಾಸ್ ಎಂಬ ಯೂಟ್ಯೂಬ್ನಲ್ಲಿ ಫ್ಯಾಕ್ಟ್ ಚೆಕ್ ಕುರಿತು ಮಾಹಿತಿ ನೀಡಿದೆ. ಆದರೆ ಅಲ್ಲಿಯೂ ಬಿಡದ ಟ್ರೋಲಿಗರು ಯಾರಿಗೆ ಗೊತ್ತು ಇದೇ ಫೇಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ನಿಜವೂ ಆಗಿರಬಹುದಲ್ಲವೆ ಎಂದು ಪ್ರಶ್ನಿಸುತ್ತಿದ್ದಾರೆ.
'ಪಾಸ್' ಯೂಟ್ಯೂಬ್ನ ಫ್ಯಾಕ್ಟ್ ಚೆಕ್ ಏನು ಹೇಳಿದೆ ನೋಡಿ...