ಧೀರೋದಾತ್ತ ಸಾಹಿತ್ಯಿಕ ಸಾಹಸಿ ಪ್ರೊ.ಕೆ.ಎಸ್. ನಾರಾಯಣಾಚಾರ್ಯ

PNA
Published on
| ಡಾ.ಎಸ್.ಆರ್.ಲೀಲಾ ಸಂಸ್ಕೃತ ವಿದುಷಿ

ಜನನ-ಮರಣಗಳ ಚಕ್ರ ಅನಿಯಂತ್ರಿತವಾಗಿ ತಿರುಗುತ್ತಲಿದೆ. ಜಗತ್ತಿನ ಈ ನಿಯಮಕ್ಕನುಗುಣವಾಗಿ ಡಾ.ಕೆ.ಎಸ್. ನಾರಾಯಣಾಚಾರ್ಯರು ಭೌತಿಕ ಶರೀರ ತ್ಯಜಿಸಿದ್ದಾರೆ. ಈ ಮಹಾನುಭಾವರು ನಮ್ಮ ನಿಮ್ಮೆಲ್ಲರ ಅತಿಶಯವಾದ ಗೌರವಾದರಗಳಿಗೆ ಪಾತ್ರರಾಗಿದ್ದು ತಮ್ಮ ವಿದ್ವತ್ತಿನಿಂದ, ಅಪೂರ್ವವಾದ ವಾಕ್​ಶಕ್ತಿಯಿಂದ ಹಾಗೂ ಅಪಾರವಾದ ಲೇಖನವ್ಯವಸಾಯದಿಂದ. ಜಗತ್​ಸಾಹಿತ್ಯದಲ್ಲಿ ಅತಿ ಪ್ರಾಚೀನವೆನಿಸಿದ ವೇದವಾಙ್ಮಯದ ಅಂತರಾರ್ಥವನ್ನು ಅರುಹುವ, ‘ವೇದಸಂಸ್ಕೃತಿಯ ಪರಿಚಯ’, ಮಹಾಸಂಪುಟಗಳಿಂದ ಹಿಡಿದು ಅತ್ಯಾಧುನಿಕವಾದ, ‘ಸೆಕ್ಯುಲರ್ ಕತೆಗಳು’, ಕಾದಂಬರಿಗಳು, ರಾಷ್ಟ್ರೀಯ ಮಹಾಕಾವ್ಯಗಳಾದ ಶ್ರೀಮದ್ರಾಮಾಯಣ, ಮಹಾಭಾರತಗಳನ್ನು ಕುರಿತ ಸರಣಿ ಬರಹಗಳು, ವರ್ತಮಾನ ವಿದ್ಯಮಾನಗಳ ವಿಶ್ಲೇಷಣೆ ಒಳಗೊಂಡ ಪತ್ರಿಕಾ ಬರಹಗಳು, ರಾಷ್ಟ್ರೀಯತೆಯನ್ನು ಹತ್ತು ಹಲವು ಮುಖಗಳಿಂದ ಪರಾಮಶಿಸಿ, ವಿವರಿಸಿ ಬರೆದ ನೂರಾರು ಪುಸ್ತಕಗಳನ್ನು, ಸಹಸ್ರಾರು ಉಪನ್ಯಾಸಗಳನ್ನು ನೀಡಿದವರು ಆಚಾರ್ಯರು. ಕನ್ನಡ ಸಾರಸ್ವತ ಲೋಕದಲ್ಲಿನ ವೈಚಾರಿಕ ಕೊರತೆಯನ್ನು ರಾಷ್ಟ್ರೆೊನ್ನತಿಯ ಹಿನ್ನೆಲೆಯಲ್ಲಿ ವಿಮಶಿಸಿ ಪ್ರಖರವಾದ ಶೈಲಿಯಲ್ಲಿ ಪ್ರಬುದ್ಧವಾಗಿ ತುಂಬಿಕೊಟ್ಟವರು ಕಾನಕಾನಹಳ್ಳಿ ಶ್ರೀನಿವಾಸ ದೇಶಿಕಾಚಾರ್ಯ ನಾರಾಯಣಾಚಾರ್ಯರು.

ಸಾಮಾಜಿಕ, ಚಾರಿತ್ರಿಕ, ಸಾಂಸ್ಕೃತಿಕ ದೃಷ್ಟಿಯಿಂದ ಸಮೃದ್ಧವಾಗಿರುವ ಆಚಾರ್ಯರ ಬರಹಗಳಿಗೆ ಮಾರುಹೋದ ಕನ್ನಡದ ಬುದ್ಧಿವಂತ ಓದುಗರು, ಇವರ ಗ್ರಂಥಗಳನ್ನು ನಾಮುಂದು ತಾಮುಂದು ಎಂದು ಖರೀದಿಸಿ ನಿರಂತರವಾಗಿ ಅವರನ್ನು ‘ಬೆಸ್ಟ್ ಸೆಲ್ಲಿಂಗ್ ಆಥರ್’ ಪಟ್ಟದಲ್ಲಿ ಕೂರಿಸಿದರು.

ಇದುವರೆಗೆ ಇವರ ಸುಮಾರು 250 ಗ್ರಂಥಗಳು ಪ್ರಕಟವಾಗಿವೆ. ದೇಶವನ್ನೆಲ್ಲ ಸುತ್ತಿದ್ದಾರೆ. ಪ್ರಾಚೀನ, ಪುಣ್ಯಕ್ಷೇತ್ರಗಳಲ್ಲಿ ಪ್ರವಚನ ಮಾಲಿಕೆಗಳನ್ನು ನೀಡಿದ್ದಾರೆ. ಕುರುಕ್ಷೇತ್ರದಲ್ಲಿ ಭಗವದ್ಗೀತೆಯನ್ನು, ಅಯೋಧ್ಯೆಯಲ್ಲಿ ಶ್ರೀಮದ್ರಾಮಾಯಣವನ್ನು, ನೈಮಿಷಾರಣ್ಯದಲ್ಲಿ ಶ್ರೀಮದ್ ಭಾಗವತ ಪುರಾಣವನ್ನು ಉಪನ್ಯಾಸಮಾಲೆಗಳ ಮೂಲಕ ಮರುವ್ಯಾಖ್ಯಾನ ಮಾಡಿ ಭಾರತೀಯ ಸಂಸ್ಕೃತಿಯ ಸಾತತ್ಯವನ್ನು ಸಾರಿದ ಈ ವಿದ್ವಾಂಸರನ್ನು ಕುರಿತು ಕರ್ನಾಟಕ ಹೆಮ್ಮೆ ಪಡಬೇಕು. ಸಹೃದಯರಾದ ಕನ್ನಡಿಗರೇನೋ ಆಚಾರ್ಯರನ್ನು ಆದರಿಸಿದ್ದಾರೆ. ಆದರೆ ಸರ್ಕಾರ ಮಾತ್ರ ಕುರುಡಾಗಿ ವರ್ತಿಸಿದೆ. ಅದ್ಭುತ ಪ್ರತಿಭಾಶಾಲಿಗಳನ್ನು ಗೌರವಿಸಬೇಕಾದದ್ದು ಸರ್ಕಾರದ ಕರ್ತವ್ಯ ಅಲ್ಲವೆ?

ಇಡೀ ಜನಸಮುದಾಯದ ಆತ್ಮಶಕ್ತಿಯನ್ನು ಉದ್ದೀಪಿಸುವಂಥ, ದೇಶಾಭಿಮಾನವನ್ನು ಉಕ್ಕಿಸುವಂಥ ಆಚಾರ್ಯರ ಬರಹಗಳು ಅಕಾಡೆಮಿಗಳ ಕಣ್ಣಿಗೆ ಕಾಣಿಸಲೆ ಇಲ್ಲ. ತಾರತಮ್ಯವೆಸಗಿರುವ ಈ ಸರ್ಕಾರಿ ಸಂಸ್ಥೆಗಳು ಗೌರವಾರ್ಹರಾದವರನ್ನು ಗೌರವಿಸದೆ ಆತ್ಮವಂಚನೆ ಮಾಡಿಕೊಂಡಿವೆಯೆಂದು ವಿಷಾದದಿಂದ ಹೇಳಬೇಕಾಗಿದೆ. ಆಚಾರ್ಯರು ಕಳೆದ ತಿಂಗಳು 88 ಪೂರೈಸಿ 89ಕ್ಕೆ ಕಾಲಿಟ್ಟರು. ಅವರ ಅರವತ್ತು ವರ್ಷಗಳ ಸಾಹಿತ್ಯಸೇವೆ ಕನ್ನಡನಾಡಿಗೊದಗಿದೆ. ಈ ಸಂದರ್ಭದಲ್ಲಿ ಮೈಸೂರಿನ ಗ.ನಾ.ಭಟ್ಟರನ್ನು ನೆನೆಯಬೇಕು. ಆಚಾರ್ಯರು 2012ರಲ್ಲಿ 80ಕ್ಕೆ ಕಾಲಿಟ್ಟಾಗ ಹತ್ತಾರು ಕಾರ್ಯಕ್ರಮಗಳನ್ನು ನಾಕಾರು ನಗರಗಳಲ್ಲಿ ಏರ್ಪಡಿಸಿ ಅವರಿಗೆ ನುಡಿನಮನವನ್ನು ಸಲ್ಲಿಸಿದರು. ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸಿದ್ದರು. ಅಷ್ಟೇ ಅಲ್ಲ, ನಾಡಿನ ಸುಪ್ರಸಿದ್ಧ ಬರಹಗಾರರಿಂದ ಉತ್ತಮ ಲೇಖನಗಳನ್ನು ಬರೆಸಿ ‘ಆರ್ಷೆಯ’ ಎಂಬ ಅಭಿನಂದನ ಗ್ರಂಥವನ್ನು ಅವರಿಗೆ ಸಮರ್ಪಿಸಿದರು. ಈ ಸ್ತುತ್ಯಕಾರ್ಯದಲ್ಲಿ ನಾನೂ ಪಾಲ್ಗೊಂಡಿದ್ದೆ ಎಂಬುದು ನನ್ನ ಭಾಗ್ಯ.

ಆಚಾರ್ಯರು ಕಳೆದೆರಡು ವರ್ಷಗಳಲ್ಲಿ 87 ಮತ್ತು 88ನೇ ವಯಸ್ಸಿನಲ್ಲಿ ನಾಲ್ಕು ಪುಸ್ತಕಗಳನ್ನು ಬರೆದರು. ಎಲ್ಲವೂ ಪ್ರಕಟವಾಗಿವೆ. ಇವೆಲ್ಲವೂ ಮಹಾಭಾರತದ ಆದಿ ಪರ್ವದ ಕಥಾಭಾಗವನ್ನಾಧರಿಸಿವೆ. ಮಹಾಭಾರತವನ್ನು ಕುರಿತು ಬರೆದವರು ನೂರಾರು ಜನ. ಆದರೆ ಆದಿಪರ್ವವನ್ನು ರ್ಸ³ಸಲು ಯಾರೂ ಮುಂದಾಗಿಲ್ಲ. ಕಾರಣ ಅದರಲ್ಲಿ ಸುಲಭವಾಗಿ ಬಿಡಿಸಲಾಗದ ಗಂಟುಗಳಿವೆ. ಅವುಗಳನ್ನು ಅರ್ಥೈಸಲು ಖಗೋಳಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ (Antropology) ಮುಂತಾದವುಗಳ ಸಹಾಯಬೇಕು. ಇದೀಗ, ಆರ್ಯರು ಭಾರತಕ್ಕೆ ವಲಸೆಬಂದರೆಂಬ ವಾದ ಪೊಳ್ಳೆಂದು (Aryan Invasion Theory) ಸಾಬೀತಾಗಿ, ಭಾರತದ ನೆಲದಿಂದ ಜಗತ್ತಿನ ವಿವಿಧ ಭಾಗಗಳಿಗೆ ಜನ-ಸಂಚಲನ ಆಯಿತೆಂಬ ಸತ್ಯ ಬಯಲಾಗತೊಡಗಿದೆ.

ಆಚಾರ್ಯರು ತಮ್ಮ ನಹುಷ, ಪುರೂರವ, ಊರ್ವಶಿ, ಸರ್ಪಯಾಗ, ಯಯಾತಿ ಕಾದಂಬರಿಗಳಲ್ಲಿ ಭಾರತದ ಅತ್ಯಂತ ಪ್ರಾಚೀನ ಇತಿಹಾಸಕ್ಕೆ ಸಂಬಂಧಿಸಿದ ಒಗಟುಗಳನ್ನು ಬಿಡಿಸಿದ್ದಾರೆ. ಅವರ ಈ ಸಾಹಿತ್ಯಿಕ ಸಾಹಸಕ್ಕೆ ಸಾಷ್ಟಾಂಗ ನಮಸ್ಕಾರಗಳು ಸಲ್ಲಬೇಕು. ಇಂದು ಆಚಾರ್ಯರ ಶರೀರ ಮರೆಯಾಗಿದ್ದರೂ ಅವರ ವೈದುಷ್ಯ, ವೈಚಾರಿಕತೆ, ಬಿಟ್ಟುಹೋಗಿರುವ ಸಾರಸ್ವತಸ್ವತ್ತು ನಿರಂತರ ಉತ್ಸಾಹವನ್ನೂ ಪ್ರೇರಣೆಯನ್ನೂ ನೀಡುವ ಸ್ಪೂರ್ತಿ ಚಿಲುಮೆಯಾಗಿ ನಮ್ಮೊಂದಿಗೆ ಇರುತ್ತದೆ. ಆದರಣೀಯರಾದ ಆಚಾರ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net