

ನವದೆಹಲಿ: ಒಂದೆಡೆ ದೆಹಲಿಯ ರಾಜ್‌ಪಥ್‌ನಲ್ಲಿ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವು ಗಣ್ಯರು ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ, ಅದೇ ಇನ್ನೊಂದೆಡೆ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅದರಲ್ಲಿಯೂ ಪಂಜಾಬ್‌ನ ರೈತರು ಗಣರಾಜ್ಯೋತ್ಸವ ನಡೆಯುತ್ತಿರುವ ಸ್ಥಳದ ಸಮೀಪ ಹೋಗಿ ಗಲಾಟೆ ಶುರು ಮಾಡಿದ್ದಾರೆ. ಗಡಿಭಾಗಗಳಲ್ಲಿ ರೈತರು ಪ್ರತಿಭಟನೆ ಮಾಡಲು ಅವಕಾಶ ನೀಡಲಾಗಿತ್ತು. ಇದಕ್ಕೆ ಕೆಲವೊಂದು ಷರತ್ತು ವಿಧಿಸಲಾಗಿತ್ತು. ಆದರೆ ಇದನ್ನು ಮೀರಿ ರೈತರು ಕೆಲವು ಗಡಿಗಳಲ್ಲಿ ಬ್ಯಾರಿಕೇಡ್ ಮುರಿಯುವ ಯತ್ನ ಮಾಡುತ್ತಿದ್ದಾರೆ.
ಇದು ಒಂದೆಡೆಯಾದರೆ, ಪಂಜಾಬ್ ರೈತನೊಬ್ಬ ಇದೀಗ ಭಾರಿ ಗಮನ ಸೆಳೆದಿದ್ದಾರೆ. ಇದಕ್ಕೆ ಕಾರಣ, ಪಂಜಾಬ್‌ನಿಂದ ದೆಹಲಿಯವರೆಗೆ (ಸುಮಾರು 375 ಕಿಲೋಮೀಟರ್) ರೀವರ್ಸ್ ಗೇರ್ ಹಾಕಿಕೊಂಡು ಬಂದಿದ್ದಾರೆ. ಈ ಮೂಲಕ ವಿನೂತನ ರೀತಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ರೀತಿಯ ಪ್ರತಿಭಟನೆ ಏಕೆ ಎಂದು ಆ ರೈತನನ್ನು ಕೇಳಿದರೆ, ನಾನು ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಂತೆ, ಕೃಷಿ ಕಾಯ್ದೆಗಳನ್ನೂ ಹಿಂದಕ್ಕೆ ಪಡೆಯಿರಿ ಎನ್ನುವ ಸಂದೇಶ ಎಂದಿದ್ದಾರೆ!
ಈ ವಿಡಿಯೋಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಗಲಾದರೂ ಕೃಷಿ ಕಾಯ್ದೆ ಹಿಂದಕ್ಕೆ ಪಡೆಯಿರಿ ಎಂದು ಹೇಳಿದರೆ, ಹೆಚ್ಚಿನವರು ಈ ಕಾಯ್ದೆಯ ಬಗ್ಗೆ ಅರಿತುಕೊಳ್ಳದೇ ಈ ರೀತಿ ನಿರ್ಧಾರಕ್ಕೆ ಬರಬೇಡಿ, ಕೆಲವರು ಬೇಕಂತಲೇ ರೈತರ ಹಾದಿ ತಪ್ಪಿಸುತ್ತಿದ್ದಾರೆ. ಹಿಮ್ಮುಖವಾಗಿ ಗಾಡಿ ಚಲಾಯಿಸಿಕೊಂಡು ಹೋಗುವುದು ಎಷ್ಟು ಅಪಾಯವೋ, ಈ ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆದರೆ ರೈತರಿಗೂ ಅಷ್ಟೇ ಅಪಾಯ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.