ಅತ್ತ ಗಣರಾಜ್ಯೋತ್ಸವ ಪರೇಡ್‌- ಇತ್ತ ಒಪ್ಪಂದ ಮೀರಿ ಬ್ಯಾರಿಕೇಡ್‌ ಮುರಿಯುತ್ತಿರುವ ರೈತರು

barricade
Published on

ನವದಹಲಿ: ದೆಹಲಿಯ ರಾಜ್‌ಪಥ್‌ನಲ್ಲಿ ಗಣರಾಜ್ಯೋತ್ಸವದ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಟ್ರ್ಯಾಕ್ಟರ್ ರ್‍ಯಾಲಿ ಮೂಲಕ ಪ್ರತಿಭಟನೆಗೆ ಮುಂದಾಗಿರುವ ರೈತರು ಗಡಿಗಳಲ್ಲಿನ ಬ್ಯಾರಿಕೇಡ್‌ ಮುರಿದು ಒಳಗೆ ನುಗ್ಗಲು ಪ್ರಯತ್ನ ಮಾಡುತ್ತಿದ್ದಾರೆ.

ದೆಹಲಿ-ಹರಿಯಾಣ ಟಿಕ್ರಿ ಗಡಿಯಲ್ಲಿ ಪೊಲೀಸ್ ನಿರ್ಮಿಸಿರುವ ಬ್ಯಾರಿಕೇಡ್‌ಗಳನ್ನು ಮುರಿದು ಗಲಾಟೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಸಿಂಘು ಗಡಿಯಲ್ಲೂ ಇದೇ ರೀತಿ ಮಾಡುತ್ತಿದ್ದು, ಗಲಾಟೆ ಶುರು ಮಾಡಿದ್ದಾರೆ. ಈ ಗಡಿಗಳಲ್ಲಿ ಪ್ರತಿಭಟನೆ ಮಾಡಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಒಪ್ಪಂದ ಮುರಿದು ಬ್ಯಾರಿಕೇಡ್‌ ಮುರಿಯುತ್ತಿರುವುದು ವರದಿಯಾಗಿದೆ.

ರೈತರು ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿ ಪ್ರವೇಶಿಸಿದ್ದಾರೆ. ಪಂಜಾಬ್‌ನ ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್‌ ತಂದಿರುವ ರೈತರು ತಂಡೋಪತಂಡವಾಗಿ ನುಗ್ಗುತ್ತಿದ್ದಾರೆ.

ಪ್ರತಿಭಟನೆ ನಡೆಸಲು ಅವರಿಗೆ ಅನುಮತಿ ನೀಡಲಾಗಿದ್ದು, ಪೊಲೀಸರು 37 ಷರತ್ತುಗಳನ್ನು ವಿಧಿಸಿದ್ದರು. ಸಿಂಗು, ಟಿಕ್ರಿ, ಗಾಜಿಪುರ ಮತ್ತು ಚಿಲ್ಲಾ ನಾಲ್ಕು ಗಡಿಗಳಲ್ಲಿ ಪ್ರತಿಭಟನೆಗೆ ತೊಡಗುವುದಿದ್ದರೆ ಈ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳಲಾಗಿತ್ತು.

ಆದರೆ ಎಲ್ಲವನ್ನೂ ರೈತರು ಕಡೆಗಣಿಸಿದ್ದಾರೆ. ಇದರಿಂದಾಗಿ ರೈತರು ಮತ್ತು ಪೊಲಿಸರ ನಡುವೆ ತಿಕ್ಕಾಟ ಏರ್ಪಟ್ಟಿದೆ.

ಸುಮಾರು 6,000 ಭದ್ರತಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸಮಸ್ಯೆ ಉಂಟು ಮಾಡುವವರನ್ನು ಗುರುತಿಸಲು ಮುಖ ಗುರುತಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net