

ನವದೆಹಲಿ: ಸೌದಿಯಲ್ಲಿ ಉದ್ಯೋಗದಲ್ಲಿ ಇರುವ ವರನೊಬ್ಬನ ಮದುವೆ ಫಿಕ್ಸ್ ಆಗಿತ್ತು. ಮದುವೆ, ಹನಿಮೂನ್ ಎಲ್ಲಾ ಸೇರಿ ಎರಡು ತಿಂಗಳ ರಜೆಯನ್ನು ಪಡೆದು ಭಾರತಕ್ಕೆ ಬಂದಿಳಿದ ಪಂಜಾಬ್‌ನ ವರ. ಇತ್ತ ಆತ ಭಾರತಕ್ಕೆ ಬಂದಿಳಿದಿದ್ದು ತಿಳಿಯುತ್ತಲೇ ಆತನನ್ನು ಕಾಣುವ ಕಾತದಲ್ಲಿದ್ದಳು ಮದುಮಗಳು.
ಮದುವೆಗಾಗಿ ಸಕಲ ಸಿದ್ಧತೆ ಮಾಡಿಕೊಂಡು, ವಧುವಿನ ಮನೆಯವರೆಲ್ಲಾ ವರನ ಮನೆಯವರಿಗೆ ಕಾದುಕುಳಿತರೆ ಅಲ್ಲಿ ಆದದ್ದೇ ಬೇರೆ. ವರ ನಾಪತ್ತೆ! ಮದುವೆಯ ಬಗ್ಗೆ ತನ್ನಂತೆಯೇ ಕಾತರನಾಗಿದ್ದ ಭಾವಿಪತಿ ಎಲ್ಲಿಗೆ ಹೋದ ಎಂದು ತಿಳಿದ ವಧು ಹಾಗೂ ಆಕೆಯ ಮನೆಯವರು ಸುಸ್ತೋ ಸುಸ್ತು!
ಅಷ್ಟಕ್ಕೂ ಆಗಿದ್ದೇನೆಂದರೆ, ಪಂಜಾಬ್‌ನ ಜಲಂಧರ್ ಸತ್ನಮ್ ಸಿಂಗ್ ಎಂಬ ಯುವಕನ ಮದುವೆ ಫಿಕ್ಸ್ ಆಗಿತ್ತು. ಎರಡು ವರ್ಷಗಳ ಹಿಂದೆಯೇ ಮದುವೆಯಾಗಬೇಕಿತ್ತು. ಆದರೆ ಎರಡು ತಿಂಗಳ ಸುದೀರ್ಘ ರಜೆ ಆತನಿಗೆ ನೀಡಲು ಕಂಪೆನಿ ಒಪ್ಪಿರಲಿಲ್ಲ. ಕೊನೆಗೂ ಎರಡು ವರ್ಷಗಳ ನಂತರ ರಜೆ ಮಂಜೂರಾಗಿತ್ತು.
ಇದೇ ಖುಷಿಯಲ್ಲಿ ವರನೂ ಇದ್ದ, ವಧುವೂ ಇದ್ದಳು. ಆದರೆ ಅಲ್ಲಿಂದ ಭಾರತಕ್ಕೆ ಬಂದಿಳಿಯುತ್ತಲೇ ಪಂಜಾಬ್‌ನ ಈ ಕುವರನಿಗೆ ರೈತರ ಪ್ರತಿಭಟನೆಯ ವಿಷಯ ತಿಳಿದಿದೆ. ತಡ ಮಾಡದೇ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಧಾವಿಸಿರುವ ವರ, ಅಲ್ಲಿಯೇ ತಾನೂ ಪ್ರತಿಭಟನೆಗೆ ಕುಳಿತಿದ್ದಾನೆ.
ಇತ್ತ ವಧುವಿನ ಕಡೆಯವರು ಮದುವೆಗೆ ರೆಡಿ ಮಾಡಿಕೊಂಡಿದ್ದರೆ, ವರ ಪ್ರತಿಭಟನಾನಿರತ! ಎರಡು ವರ್ಷಗಳ ನಂತರ ರಜೆ ಸಿಕ್ಕಿದೆ, ಮತ್ತೆ ಸಿಗುತ್ತದೆಯೋ ಇಲ್ಲವೋ, ಆದ್ದರಿಂದ ಈಗಲೇ ಮದುವೆ ಶಾಸ್ತ್ರ ಮುಗಿಸಿಬಿಡೋಣ. ಈ ಪ್ರತಿಭಟನೆ ಎಷ್ಟು ದಿನ ಮುಂದುವರೆಯುತ್ತದೆಯೋ ಗೊತ್ತಿಲ್ಲ. ಆದ್ದರಿಂದ ಮದುವೆಗೆ ಬಾ ಎಂದು ಕರೆದರೂ ವರ ಮಾತ್ರ ಒಪ್ಪಲೇ ಇಲ್ಲ.
ನಾನು ಮೊದಲು ರೈತ, ಆಮೇಲೆ ಉಳಿದದ್ದು. ಆದ್ದರಿಂದ ಮದುವೆ ಇನ್ನೊಂದು ದಿನ ಆಗಬಹುದು. ಪ್ರತಿಭಟನೆಯಲ್ಲಿ ಈಗಲೇ ಪಾಲ್ಗೊಳ್ಳದಿದ್ದರೆ ನಾನು ಕೃಷಿಕನಾಗಿ ಪ್ರಯೋಜನಕ್ಕೆ ಬರುವುದಿಲ್ಲ ಎಂದಿದ್ದಾನೆ ಈ ಕೃಷಿಕ ರೈತ. ಒಟ್ಟಿನಲ್ಲಿ ರೈತರ ಪ್ರತಿಭಟನೆಯಿಂದ ಈ ಮದುಮಕ್ಕಳಿಗೆ ಮದುವೆಯ ಯೋಗ ಇನ್ನಾವಾಗ ಬರುತ್ತದೆಯೋ ತಿಳಿಯದು!