

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಲಶಾಲಿಯಾಗುತ್ತಲೇ ಸಾಗಿದೆ. ಇದಾಗಲೇ ಅನೇಕ ತೃಣಮೂಲ ಕಾಂಗ್ರೆಸ್ (ಟಿಎಂಎಸ್) ಮುಖಂಡರು ಭಾರತೀಯ ಜನತಾ ಪಕ್ಷದತ್ತ ವಾಲಲು ಶುರು ಮಾಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿಬಿಟ್ಟಿದೆ. ಮಾತ್ರವಲ್ಲದೇ ಟಿಎಂಸಿ ಮುಖಂಡರ ನಿದ್ದೆಗೆಡಿಸಿದೆ.
ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿ ಯಾರು ಹೋದರೂ ಹೋಗಲಿ, ನಾನೇನೂ ತಡೆಯಲ್ಲ. ನಮಗೆ ಅವರೆಲ್ಲಾ ಬೇಕಾಗೂ ಇಲ್ಲ ಎಂದಿದ್ದರೆ, ಜತೆಗೆ ಹೋಗುವಾಗ ನನ್ನ ಸಾವಿನ ಬಗ್ಗೆ ಪ್ರಾರ್ಥನೆ ಮಾಡಿ ಹೋಗಿ ಎಂದು ಹೇಳುವ ಮೂಲಕ ಎಲ್ಲರೂ ತಮ್ಮ ಕೈಬಿಟ್ಟು ಹೋಗುತ್ತಿರುವುದಕ್ಕೆ ಹತಾಶ ಭಾವನೆ ವ್ಯಕ್ತಪಡಿಸಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕಳೆದ ತಿಂಗಳು ಪಶ್ಚಿಮಬಂಗಾಳಕ್ಕೆ ಭೇಟಿ ನೀಡುತ್ತಲೇ ಈ ಬೆಳವಣಿಗೆ ನಡೆದಿದೆ, ಇನ್ನೂ ಕೆಲವರು ಟಿಎಂಸಿಯಿಂದ ಹೊರಕ್ಕೆ ಒಂದು ಕಾಲಿಟ್ಟಿದ್ದಾರೆ.
ಈ ಎಲ್ಲಾ ಬೆಳವಣಿಗೆಗೆ ಕಾರಣ ನೇರವಾಗಿ ಮಮತಾ ಬ್ಯಾನರ್ಜಿಯೇ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಆಕ್ರೋಶ ಹೊರಹಾಕಿದ್ದಾರೆ. ಕೋಲ್ಕತಾದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಭಾಷಣ ಮಾಡಿ ನೇರವಾಗಿ ಮಮತಾ ಮೇಲೆ ಆರೋಪ ಹೊರಿಸಿದರು.
21 ವರ್ಷಗಳ ಹಿಂದೆ ಅಂದರೆ 1999ರಲ್ಲಿ ಪಶ್ಚಿಮಬಂಗಾಳದಲ್ಲಿ ಬಿಜೆಪಿಯು ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಜತೆ ಮೈತ್ರಿಕೂಟ ಮಾಡಿಕೊಂಡಿತ್ತು. 1999ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಈ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು.
ಈ ವಿಷಯವನ್ನು ನೆನಪು ಮಾಡಿಕೊಂಡ ರಂಜನ್ ಚೌಧರಿ , 1999ರಲ್ಲಿಯೇ ಎಚ್ಚರಿದ್ದೆವು. ಈ ರೀತಿ ಮೈತ್ರಿ ಬೇಡ ಎಂದು. ಬಿಜೆಪಿಗೆ ಬಾಗಿಲು ತೆರೆಯಬೇಡ ಎಂದು ಎಷ್ಟು ಎಚ್ಚರಿಕೆ ನೀಡಿದ್ದರೂ ಮಮತಾ ಕೇಳಲಿಲ್ಲ. ಆಗ ಬಾಗಿಲು ತೆರೆದದ್ದೇ ಈಗ ಇಷ್ಟೊಂದು ಅವಾಂತರಕ್ಕೆ ಕಾರಣವಾಗಿದೆ. ಇಲ್ಲದಿದ್ದರೆ ಬಿಜೆಪಿ ಇಷ್ಟೊಂದು ಬೆಳೆಯುತ್ತಿರಲಿಲ್ಲ ಎಂದು ಆಕ್ರೋಶಭರಿತವಾಗಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿಯವರ ಈ ನಿರ್ಧಾರದಿಂದಾಗಿಯೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಹೆಜ್ಜೆಯನ್ನು ಬಲಪಡಿಸಿದೆ. ಆಗ ಬಾಗಿಲು ತೆರೆಯದೇ ಹೋಗಿದ್ದರೆ ಬಂಗಾಳದ ಒಳಗೆ ಬರಲು ಬಿಜೆಪಿಗೆ ಸಾಧ್ಯವಾಗುತ್ತಿರಲಿಲ್ಲ. ಆಗ ಎಚ್ಚರಿಕೆ ನೀಡಿದ್ದರೂ ಕೇಳದೇ ಈಗ ವಿಷಾದಿಸಿದರೆ ಏನು ಪ್ರಯೋಜನ ಎಂದು ಹರಿಹಾಯ್ದರು.
ಒಟ್ಟಿನಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.