

ಕೋಲ್ಕತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನಗಳ ಮೇಲಿನ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಪಶ್ವಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಖಡ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಕಿ ಜೊತೆ ಆಟ ಆಡಬೇಡಿ ಎಂದು ಕಿಡಿಕಾರಿದ್ದಾರೆ.
ಕೋಲ್ಕತಾದಿಂದ ದಕ್ಷಿಣ 24 ಪರಗಣದ ಡೈಮಂಡ್ ಹಾರ್ಬರ್ಗೆ ತೆರಳುವ ಮಾರ್ಗ ಮಧ್ಯೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ದಾಳಿಗೆ ಸಂಬಂಧಪಟ್ಟಂತೆ ಮಮತಾ ವಿರುದ್ಧ ಹರಿಹಾಯ್ದ ಅವರು, ಒಳಗಿನವರು ಮತ್ತು ಹೊರಗಿನವರ ಮಧ್ಯೆ ಅಪಾಯಕಾರಿ ಆಟ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕು ದಿನವೇ ಇಂತಹ ದಾಳಿ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಕಲ್ಲು ತೂರಾಟ ಘಟನೆ ಬಳಿಕ ಶುಕ್ರವಾರ ಮಾಧ್ಯಮಗಳ ಮಂದೆ ಜಗದೀಪ್ ಧನ್ಖಡ್, ರಾಜ್ಯದಲ್ಲಿಯ ಪರಿಸ್ಥಿತಿ ಚೆನ್ನಾಗಿಲ್ಲ. ದಾಳಿ ಸಂಬಂಧ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಅದರ ವಿಷಯಗಳನ್ನು ಸ್ವಾಮ್ಯದ ಕಾರಣದಿಂದ ಹಂಚಿಕೊಳ್ಳಲಾಗುವುದಿಲ್ಲ ಮುಖ್ಯಮಂತ್ರಿಗಳು ಬೆಂಕಿ ಜತೆ ಆಡದಿರುವುದು ಉತ್ತಮ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾನೂನು, ಸುವ್ಯವಸ್ಥೆ ಉಲ್ಲಂಘಿಸಿದವರಿಗೆ ಪೊಲೀಸರ, ಆಡಳಿತಗಾರರ ರಕ್ಷಣೆಯಿದೆ. ಅದರಿಂದಾಗಿಯೇ ಇಂತಹ ಸಮಾಜಘಾತುಕ ಕೃತ್ಯವೆಸಗಲು ಧೈರ್ಯ ಬರುತ್ತದೆ. ಯಾರು ಹೊರಗಿನವರು, ಯಾರು ಒಳಗಿನವರು ಎಂಬ ಮೊಂಡು ವಾದದಿಂದ ಮುಖ್ಯಮಂತ್ರಿಗಳು ಹಿಂದೆ ಸರಿಯಬೇಕು.
ಸದ್ಯ ನಡೆದಿರುವ ಘಟನೆಗಳು ದುರದೃಷ್ಟಕರ. ಸಿಎಂ ಸಂವಿಧಾನಕ್ಕೆ ಗೌರವ ನೀಡಿ, ಅದರಂತೆ ನಡೆದುಕೊಳ್ಳಬೇಕಿದೆ. ತಮ್ಮ ಜವಾಬ್ದಾರಿಗಳಿಂದ ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆ ನಡೆದ ಅಹಿತಕರ ಘಟನೆ ಬಗ್ಗೆ ರಾಜ್ಯದ ಜನತೆ ಬಳಿ ಸಿಎಂ ಕ್ಷಮೆ ಕೇಳಬೇಕೆಂದು ರಾಜ್ಯಪಾಲರು ಆಗ್ರಹಿಸಿದ್ದಾರೆ.
ಗುರುವಾರ ನಡೆದ ಕಲ್ಲು ತೂರಾಟದ ಕುರಿತು ಗೃಹಸಚಿವಾಲಯ ಡಿಜಿಪಿ ಸೇರಿದಂತೆ ಘಟನೆಯ ಮಾಹಿತಿ ಕೇಳಿ ಸಮನ್ಸ್ ನೀಡಿದೆ.