VIDEO: ಕ್ಷೇತ್ರಕ್ಕಾಗಿ ಏನು ಮಾಡಿದ್ದೀರಿ ಎಂದು ಮತದಾರನೊಬ್ಬ ಪ್ರಶ್ನಿಸಿದ್ದಕ್ಕೆ ಶಾಸಕನಿಂದ ಹಲ್ಲೆ!

joginder
Published on

ಚಂಡೀಗಢ: ‘ಶಾಸಕನಾಗಿ ನಿಮ್ಮ ಅವಧಿಯಲ್ಲಿ ಏನು ಕೆಲಸ ಮಾಡಿದ್ದೀರಿ' ಎಂದು ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಕಾಂಗ್ರೆಸ್‌ ಶಾಸಕನೊಬ್ಬ ಹಲ್ಲೆ ಮಾಡಿರುವ ಘಟನೆ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ನಡೆದಿದೆ.

ಪಠಾಣ್‌ಕೋಟ್ ಜಿಲ್ಲೆಯ ಭೊವಾ ಕ್ಷೇತ್ರದ ಶಾಸಕ ಜೋಗಿಂದರ್ ಪಾಲ್ ಇಂಥ ಕೃತ್ಯ ಎಸಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಶಾಸಕನ ಜತೆ ಅವರ ಭದ್ರತಾ ಸಿಬ್ಬಂದಿ ಕೂಡ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.

ಜೋಗಿಂದರ್ ಪಾಲ್ ಸಭೆಯಲ್ಲಿ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಗ್ರಾಮದ ಹರ್ಷ ಕುಮಾರ್ ಎಂಬುವರು ಈ ಪ್ರಶ್ನೆ ಕೇಳಿದ್ದಾರೆ. ಮೊದಲು ಹರ್ಷ ಕುಮಾರ್‌ ಅವರು ಶಾಸಕರ ಬಳಿ ಬರಲು ಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಆದರೂ ಹರ್ಷ ಅವರು ಒತ್ತಾಯ ಮಾಡಿದಾಗ ಖುದ್ದು ಶಾಸಕ ಜೋಗಿಂದರ್ ಪಾಲ್ ಮಾತನಾಡುವಂತೆ ಹೇಳಿ ಮೈಕ್‌ ಅನ್ನು ಅವರ ಕೈಗೆ ನೀಡಲು ಸೂಚಿಸಿದ್ದಾರೆ. ಮೈಕ್‌ ಹಿಡಿದ ಹರ್ಷ ಕುಮಾರ್‌, 'ಶಾಸಕನಾಗಿ ನಿಮ್ಮ ಅವಧಿಯಲ್ಲಿ ಏನು ಕೆಲಸ ಮಾಡಿದ್ದೀರಿ' ಎಂದು ಪ್ರಶ್ನಿಸಿದ್ದಾರೆ. ಇದರಿಂದ ಗರಂ ಆದ ಶಾಸಕ, ಕೂಡಲೇ ವ್ಯಕ್ತಿಯ ಕೆನ್ನೆಗೆ ಹೊಡೆದಿದ್ದಾರೆ. ಮಾತ್ರವಲ್ಲದೇ ಹಲ್ಲೆಯನ್ನೂ ಮಾಡಿದ್ದು, ಇದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಎಚ್ಚೆತ್ತುಕೊಂಡ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್‌ಜಿಂದರ್ ಸಿಂಗ್ ರಂಧಾವ ಘಟನೆಯನ್ನು ಖಂಡಿಸಿದ್ದಾರೆ. ಶಾಸಕರು ಜನರ ಸೇವೆ ಮಾಡುವುದಕ್ಕಾಗಿಯೇ ಇರುವುದು ಹೊರತು ಈ ತರ ವರ್ತಿಸುವುದಕ್ಕಲ್ಲ ಎಂದಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net