ದಿಢೀರ್‌ ಕಾಣೆಯಾದ ಪುನೀತ್‌ ಅಭಿಮಾನಿ! ನಾಲ್ಕು ದಿನಗಳಿಂದ ಎಲ್ಲಿಯೂ ಸಿಗದೇ ಕುಟುಂಬಸ್ಥರ ಆಕ್ರಂದನ

karkala
Published on

ಉಡುಪಿ: ನಟ ಪುನೀತ್‌ ರಾಜ್‌ಕುಮಾರ್‌ ಅವರ ಸಾವನ್ನು ಅರಗಿಸಿಕೊಳ್ಳಲಾಗದೇ ಅವರ ಹಲವು ಅಭಿಮಾನಿಗಳು ಖಿನ್ನತೆಗೆ ಜಾರುತ್ತಿದ್ದರೆ, ಇದಾಗಲೇ ಕೆಲವರು ಆತ್ಮಹತ್ಯೆ ಮಾರ್ಗವನ್ನೂ ಹಿಡಿದುಬಿಟ್ಟಿದ್ದಾರೆ. ಇದೀಗ ಕಾರ್ಕಳದ ವ್ಯಕ್ತಿಯೊಬ್ಬರು ಪುನೀತ್‌ ಅವರ ಸಾವಿನ ಸುದ್ದಿ ಕೇಳುತ್ತಲೇ ಆಘಾತಗೊಂಡಿದ್ದು, ಮನೆಯಿಂದ ಏಕಾಏಕಿ ನಾಪತ್ತೆಯಾಗಿಬಿಟ್ಟಿದ್ದಾರೆ.

56 ವರ್ಷದ ದಿನೇಶ್ ಕಾಣೆಯಾಗಿದ್ದು, ನಾಲ್ಕು ದಿನಗಳಿಂದ ಇವರಿಗಾಗಿ ಮನೆಯವರು ಹುಡುಕದ ಜಾಗವಿಲ್ಲ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ದಿನೇಶ್‌ ಅವರ ಸಾವಿನ ಬಗ್ಗೆ ಟಿ.ವಿಯಲ್ಲಿ ಸುದ್ದಿಯನ್ನು ನೋಡುತ್ತಿದ್ದಂತೆಯೇ ಮನೆಯಿಂದ ಹೊರಟವರು ವಾಪಸ್‌ ಬಂದಿಲ್ಲ!

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ದಿನೇಶ್, ಕಾರ್ಕಳದ ರಾಧಿಕಾ ಥಿಯೇಟರ್ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು. ಸಿನಿಮಾ ನಟರು ಅದರಲ್ಲಿಯೂ ಪುನೀತ್‌ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು, ಲಾಕ್‌ಡೌನ್‌ ಆರಂಭವಾದ ನಂತರ ಕಾರ್ಕಳದ ದಾನಶಾಲಾ ವರ್ಧಮಾನ ಲಾಡ್ಜ್‌ಗೆ ಕೆಲಸಕ್ಕೆ ಸೇರಿದ್ದರು.

ಪುನೀತ್ ಅನಾರೋಗ್ಯ ಮತ್ತು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ತಮ್ಮ ವಸ್ತುಗಳು ಹಾಗೂ ಮೊಬೈಲನ್ನು ಲಾಡ್ಜಿನಲ್ಲಿ ಬಿಟ್ಟು, ತೆರಳಿದ್ದಾರೆ. ನಾಪತ್ತೆಯಾಗಿರುವ ದಿನೇಶ್, ಪುನೀತ್ ಅಂತಿಮ ಯಾತ್ರೆ ನೋಡಲು ಬೆಂಗಳೂರಿಗೆ ತೆರಳಿರುವ ಸಾಧ್ಯತೆಗಳಿವೆ ಅಥವಾ ಹುಟ್ಟೂರು ಕಡೂರಿಗೂ ಹೋಗಿರಬಹುದು ಎಂದು ಊಹಿಸಲಾಗಿತ್ತು. ಆದರೆ ನಾಲ್ಕು ದಿನಗಳಿಂದ ಅವರ ಪತ್ತೆಯೇ ಇಲ್ಲದಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

ಪತಿ ಕಾಣೆಯಾದ ಬಗ್ಗೆ ಮಂಗಳವಾರ ಪತ್ನಿ ಸುಮಾ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಂದೆ ಎರಡು ಮೂರು ಬಾರಿ ಮನೆಯಿಂದ ತೆರಳಿದ್ದ ಮತ್ತೆ ವಾಪಸ್‌ ಆಗಿದ್ದರಿಂದ ಮೊದಮೊದಲಿಗೆ ಕುಟುಂಬದವರು ಅಷ್ಟೇನೂ ಯೋಚಿಸರಲಿಲ್ಲ. ಆದರೆ ಇದೀಗ ನಾಲ್ಕು ದಿನವಾದರೂ ಪತ್ತೆ ಇಲ್ಲದ್ದು, ಹಾಗೂ ಪುನೀತ್‌ ಸಾವಿನಿಂದ ಬಹಳ ನೊಂದುಕೊಂಡಿದ್ದರಿಂದ ಆತಂಕ ಮನೆಮಾಡಿದೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net