ಡಾ.ರಾಜ್‌ಕುಮಾರ್‌ ಉರುಫ್‌ ಮುತ್ತುರಾಜನಾದ ನಾನು ನನ್ನ ಮಗ ಮಾಸ್ಟರ್‌ ಲೋಹಿತನ ಹೆಸರನ್ನು...

lohithname
Published on

ಬೆಂಗಳೂರು: ಮಾಸ್ಟರ್‌ ಲೋಹಿತ್‌ ಎಂದಾಕ್ಷಣ ನೆನಪಿಗೆ ಬರುವುದು ಆ ಮುದ್ದುಮೊಗದ ಪುಟಾಣಿ, ಡಾ.ರಾಜ್‌ಕುಮಾರ್‌ ಅವರ ಪುತ್ರ. ಅದು 1965. ಡಾ.ರಾಜ್‌ಕುಮಾರ್‌ ಅಭಿನಯನ ಸತ್ಯಹರಿಶ್ಚಂದ್ರ ಚಿತ್ರ ಸೂಪರ್‌ಹಿಟ್‌ ಆಗಿತ್ತು. ಅದರಲ್ಲಿ ಸತ್ಯಹರಿಶ್ಚಂದ್ರನ ಪುತ್ರ ಲೋಹಿತಾಶ್ವ. ಇದು ಡಾ.ರಾಜ್‌ಕುಮಾರ್‌ ಅವರಿಗೆ ತುಂಬಾ ಇಷ್ಟವಾದ ಹೆಸರಾಗಿಬಿಟ್ಟಿತ್ತು.

1975ರಲ್ಲಿ ಮಗ ಜನಿಸಿದಾಗ ಮಗನಿಗೆ ಲೋಹಿತ್‌ ಎಂದೇ ಹೆಸರು ಇಟ್ಟರು. 10 ವರ್ಷಗಳವರೆಗೂ ಇದೇ ಹೆಸರಿನಲ್ಲಿ ಪುನೀತ್‌ ಪ್ರಸಿದ್ಧಿಗೆ ಬಂದರು. ಇದೇ ಹೆಸರಿನಲ್ಲಿ ಅವರು, ನಿರ್ದೇಶಕ ವಿ. ಸೋಮಶೇಖರ್ ಅವರ ಪ್ರೇಮದ ಕಾಣಿಕೆ (1976-ಆಗಿನ್ನೂ ಆರು ತಿಂಗಳ ಶಿಶು) ಮತ್ತು ಆರತಿ ಚಿತ್ರದಲ್ಲಿ ಕಾಣಿಸಿಕೊಂಡರು. ಒಂದು ವರ್ಷದ ಮಗುವಾಗಿದ್ದಾಗ ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿಯನ್ನು ಆಧರಿಸಿದ ಅದೇ ಹೆಸರಿನ ಸನಾದಿ ಅಪ್ಪಣ್ಣ (1977) ಚಿತ್ರದಲ್ಲಿ ನಟಿಸಿದರು. ತಾಯಿಗೆ ತಕ್ಕ ಮಗ (1978) ನಿರ್ದೇಶಕ ದೊರೈ-ಭಗವಾನ್ ಅವರ ವಸಂತ ಗೀತೆ ( 1980), ಕೆ. ಎಸ್. ಎಲ್. ಸ್ವಾಮಿಯವರ ಪೌರಾಣಿಕ ನಾಟಕ ಭೂಮಿಗೆ ಬಂದ ಭಗವಂತ (1981), ಬಿ. ಎಸ್. ರಂಗ ಅವರ ಭಾಗ್ಯವಂತ (1982) ಕಾಣಿಸಿಕೊಂಡರು. ಇದರಲ್ಲಿನ ’ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ’ ಹಾಡು ಮಾತ್ರ ಇಂದಿಗೂ ಜನಮಾನಸದಲ್ಲಿ ನೆಲೆಸಿದೆ.

ನಂತರ ಅವರು ಮಿಂಚಿದ್ದು ಚಲಿಸುವ ಮೋಡಗಳು ಮತ್ತು ಹೊಸ ಬೆಳಕು ಚಿತ್ರಗಳಲ್ಲಿ. ಇದಾದ ಬಳಿಕ ಅತ್ಯುತ್ತಮ ಬಾಲ ಕಲಾವಿದ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಪಡೆದ ಹೆಮ್‌ಮೆ ಅವರದ್ದು. ಭಕ್ತ ಪ್ರಹ್ಲಾದ ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ತಮ್ಮ ಎರಡನೇ ಅತ್ಯುತ್ತಮ ಬಾಲ ಕಲಾವಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿತು.

1984ರಲ್ಲಿ ‘ಯಾರಿವನು’ ಚಿತ್ರದಲ್ಲಿ ನಟಿಸಿದರು. ಇದರಲ್ಲಿನ ’ಕಣ್ಣಿಗೆ ಕಾಣುವ’ ಹಾಡು ಕೂಡ ಹಚ್ಚ ಹಸಿರಾಗಿದೆ. ಬಾಲನಟನಾಗಿ ಅವರಿಗೆ ತುಂಬಾ ಪ್ರಸಿದ್ಧಿ ಹಾಗೂ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್‌ ಕೊಟ್ಟ ಚಿತ್ರ ಎಂದರೆ 1985ರಲ್ಲಿ ತೆರೆಕಂಡ ‘ಬೆಟ್ಟದ ಹೂವು’.

ಇದಾದ ಬಳಿಕ ಲೋಹಿತ್‌ ರಾಜ್‌ಕುಮಾರ, ಪುನೀತ್‌ ರಾಜ್‌ಕುಮಾರ್‌ ಆಗಿ ಬದಲಾದರು. ಇದಕ್ಕೆ ಕಾರಣ, ಲೋಹಿಶಾತ್ವ ಎನ್ನುವುದು ಅಲ್ಪಾಯುವಿನ ಹೆಸರನ್ನು ಸೂಚಿಸುತ್ತದೆ. ಆದ್ದರಿಂದ ಹೆಸರನ್ನು ಬದಲಿಸಿ ಎಂದು ಹಿರಿಯರು ಕೊಟ್ಟ ಸಲಹೆ. ಆಗ ಡಾ.ರಾಜ್‌ಕುಮಾರ್‌ ಅವರು, ಪತ್ರಿಕೆಯೊಂದರಲ್ಲಿ ಕೊಟ್ಟ ಜಾಹೀರಾತು ಇದೀಗ ಭಾರಿ ವೈರಲ್‌ ಆಗಿದೆ.

ಅದರಲ್ಲಿ ಡಾ.ರಾಜ್‌ಕುಮಾರ್‌ ಅವರು, ‘ಡಾ. ರಾಜ್​ಕುಮಾರ್​ ಉರುಫ್​ ಎಸ್​.ಪಿ. ಮುತ್ತುರಾಜ್​ ಆದ ನಾನು ನನ್ನ ಮಗ ಮಾಸ್ಟರ್​ ಲೋಹಿತ್​ ಹೆಸರನ್ನು ಇಂದಿನಿಂದ ಅಂದರೆ ದಿನಾಂಕ 16-3-1985ರಂದು ಮಾಸ್ಟರ್​ ಪುನೀತ್​ ಎಂಬುದಾಗಿ ಬದಲಾಯಿಸುತ್ತೇನೆ. ಈ ಹೆಸರು ಬದಲಾವಣೆ ಬಗ್ಗೆ ನೋಟರಿ ಎಸ್​.ಬಿ. ಚಂದ್ರಶೇಖರ್​ ಅವರ ಸಮಕ್ಷಮದಲ್ಲಿ ಪ್ರಮಾಣ ಪತ್ರ ಮಾಡಿಸಿರುತ್ತೇನೆ’ ಎಂದು ಜಾಹೀರಾತು ನೀಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಅಸಂಖ್ಯ ಅಭಿಮಾನಿಗಳಿಗೆ ಕಣ್ಣೀರು ತರಿಸಿದೆ. ಹೆಸರು ಬದಲಾಯಿಸಿದರೂ ಪುನೀತ್‌ ಅಲ್ಪಾಯುವಾಗಿಯೇ ಹೋಗಿಬಿಟ್ಟರು ಎಂದು ಅಭಿಮಾನಿಗಳು ಕಣ್ಣೀರಿನ ಕೋಡಿ ಹರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net