

ಲಂಡನ್: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಅವಕಾಶ ನೀಡಬೇಕು ಎಂದು ಕೆಲ ದಿನಗಳ ಹಿಂದೆ ಹೇಳುವ ಮೂಲಕ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡಿಯೋ ಭಾರಿ ವಿವಾದ ಸೃಷ್ಟಿಸಿದ್ದರು.
ಪ್ರತಿಭಟಿಸುವ ಹಕ್ಕನ್ನು ಜನರಿಗೆ ನೀಡಬೇಕು. ಶಾಂತಿಯುತವಾಗಿ ಪ್ರತಿಭಟನೆ ನಡೆಯಬೇಕು. ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅವರಿಗೆ ಅವಕಾಶ ನೀಡಬೇಕು ಎಂದು ಟ್ರುಡಿಯೋ ಹೇಳಿದ್ದರು. ನಂತರ ಅಮೆರಿಕದಲ್ಲಿಯೂ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿತ್ತು. ಇದೀಗ ಲಂಡನ್ ಸರದಿ.
ಈ ಕೃಷಿ ಕಾನೂನು ವಿರೋಧಿಸಿ ಲಂಡನ್ನಲ್ಲಿ ಪ್ರತಿಭಟನೆ ಶುರುವಾಗಿದೆ. ಭಾರತೀಯ ದೂತಾವಾಸ ಕಚೇರಿ ಎದುರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಗುಂಪುಗೂಡಿ ರೈತರ ಬೇಡಿಕೆ ಈಡೇರಿಸಬೇಕೆಂದು ಹೋರಾಟ ನಡೆಸಿದ್ದಾರೆ. ರೈತರಿಗೆ ನ್ಯಾಯ ಬೇಕು- ನ್ಯಾಯ ಸಿಗಲೇಬೇಕು ಎಂಬ ಭಿತ್ತಿಪತ್ರ ಫಲಕ ಸೇರಿದಂತೆ ಹಲವು ಬಗೆಯ ಘೋಷಣಾ ಫಲಕ ಹಿಡಿದು ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆಯಲ್ಲಿ ಸಿಖ್ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬರ್ಮಿಂಗ್ಹ್ಯಾಂ, ಡರ್ಬಿ ಸೇರಿದಂತೆ ಹಲವಾರು ಕಡೆಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಿಂದ ಲಂಡನ್ಗೆ ಆಗಮಿಸಿದ್ದರು. ಹಳದಿ ಬಣ್ಣದ ತ್ರಿಭುಜ ಆಕಾರದ ಸಿಖ್ಖರ ಬಾವುಟಗಳು ಲಂಡನ್ ರಸ್ತೆಗಳಲ್ಲಿ ಸುಳಿದಾಡಿದವು.
ಕರೊನಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಹಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಕಚೇರಿಗೆ ಬಿಗಿಭದ್ರತೆ ಒದಗಿಸಲಾಗಿದ್ದು ಸಾವಿರಾರು ಪೊಲೀಸರನ್ನು ಬಂದೋ ಬಸ್ತ್ಗೆ ನಿಯೋಜನೆ ಮಾಡಲಾಗಿದೆ.
ಸಾವಿರಾರು ಜನರು ತಮ್ಮ ತಮ್ಮ ವಾಹನಗಳಲ್ಲಿ ಬಂದು ಘೋಷಣೆ, ಪ್ರತಿಭಟನೆ, ಹಾರ್ನ್ಗಳ ಸದ್ದಿನ ಮೂಲಕ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು. ದೂತಾವಾಸ ಕಚೇರಿ ಸುತ್ತಲೂ ತಮ್ಮ ವಾಹನಗಳ ಪೆರೇಡ್ ಮಾಡಿ ಸುತ್ತಲೂ ಟ್ರಾಫಿಕ್ ಜಾಮ್ ಸೃಷ್ಟಿಸಿದಲ್ಲದೆ ಏಕಕಾಲದ ಹಾರ್ನ್ ಮೂಲಕ ಕರ್ಕಶ ಶಬ್ದಗಳನ್ನ ಹೊರಡಿಸಿ ತಮ್ಮ ಆಕ್ರೋಶ ಹೊರಹಾಕಿದರು. ಬ್ರಿಟನ್ನಲ್ಲಿ ಹಾರ್ನ್ ಮೂಲಕ ಪ್ರತಿಭಟನೆ ನಡೆಸುವುದು ಅಥವಾ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವುದು ರೂಢಿಗತವಾದ ಪದ್ಧತಿಯಾಗಿದೆ.