ನನಗೆ ಕೆಲಸವಿಲ್ಲದಿದ್ದರೆ ಉದ್ಯೋಗಸ್ಥ ಮಗನಿಂದ ಜೀವನಾಂಶ ಕೇಳಬಹುದೆ?

nyayadevate
Published on
ಪ್ರಶ್ನೆ: ‘ನನಗೆ ಮದುವೆ ಆಗಿ ಮೂವತ್ತೈದು ವರ್ಷ ಆಗಿದೆ. ಎರಡು ವರ್ಷಗಳಿಂದ ನಾನು ಮತ್ತು ನನ್ನ ಹೆಂಡತಿ ಬೇರೆ ಇದ್ದೇವೆ. ನನ್ನ ಹೆಂಡತಿ ನಮ್ಮ ಮೂವತ್ತೊಂದು ವರ್ಷದ ಮಗನ ಜೊತೆ ಇದ್ದಾಳೆ. ಅವನು ಒಳ್ಳೆಯ ಕೆಲಸದಲ್ಲಿ ಇದ್ದಾನೆ. ನನಗೆ ಕೆಲಸವಿಲ್ಲ. ನನ್ನ ಮಗ ತಿಂಗಳಿಗೆ ಹತ್ತು ಸಾವಿರ ಕಳಿಸವುದರಲ್ಲಿ ನಾನೊಬ್ಬನೇ ವಾಸವಿದ್ದೇನೆ. ಈಗ ನನ್ನ ಪ್ರಶ್ನೆ ಏನೆಂದರೆ ನಾನು ಇಷ್ಟು ವರ್ಷಗಳ ನಂತರ ಈಗ ನನ್ನ ಹೆಂಡತಿಯ ವಿರುದ್ಧ ವಿಚ್ಛೇದನ ಪಡೆಯಬಹುದೇ?ಹಾಗೆ ವಿಚ್ಛೇದನ ಪಡೆದರೆ ಅವಳಿಗೆ ಜೀವನಾಂಶ ಕೊಡಬೇಕೇ? ಹಾಗೆ ಮಾಡಿದಾಗ ನನ್ನ ಮಗ ಹಣ ಕೊಡುವುದನ್ನು ನಿಲ್ಲಿಸಿದರೆ., ನಾನು ಅವನಿಂದ ಜೀವನಾಂಶ ಪಡೆಯಬಹುದೇ?

ಉತ್ತರ: ಹಿಂದೂ ವಿವಾಹ ಕಾಯ್ದೆಯ ಕಲಂ 13ರಲ್ಲಿ ಸೂಚಿಸಿರುವ ಕಾರಣಗಳಲ್ಲಿ ಯಾವುದಾದರೂ ಇದ್ದರೆ ನೀವು ವಿಚ್ಛೇದನಕ್ಕೆ ನಿಮ್ಮ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಬಹುದು. ಉದಾಹರಣೆಗೆ ನಿಮಗೆ ಪತ್ನಿಯಿಂದ ವಿಪರೀತವಾದ ಕ್ರೂರತೆ ಆಗಿದೆ ಎನ್ನುವುದಾದರೆ ನೀವು ವಿಚ್ಛೇದನ ಕೇಳಬಹುದು. ನೀವು ಕೇಳಿದ ತಕ್ಷಣ ನಿಮಗೆ ಆದೇಶ ಆಗುತ್ತದೆ ಎಂದು ತಿಳಿಯ ಬೇಡಿ. ಹಲವಾರು ವರ್ಷ ಪ್ರಕರಣ ಬೇರೆ ಬೇರೆ ಹಂತಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ನಡೆಯಬಹುದು.

ಪ್ರಕರಣ ನಡೆಯುವಾಗಲೂ ನಿಮ್ಮ ಪತ್ನಿ ನಿಮ್ಮಿಂದ ಜೀವನಾಂಶ ಕೊಡಿಸಬೇಕೆಂದು ಅರ್ಜಿ ಹಾಕಬಹುದು. ಆಕೆಗೆ ತನ್ನದೇ ಆದ ಆದಾಯ ಇಲ್ಲದಿದ್ದರೆ , ಆಗ, ನಿಮ್ಮ ಆದಾಯ ವೆಚ್ಚ, ಸ್ಥಿರ ಚರ ಆಸ್ತಿಗಳ ಆಧಾರದ ಮೇಲೆ ಆಕೆಗೆ ನೀವು ಎಷ್ಟು ಜೀವನಾಂಶ ಕೊಡಬೇಕು ಎನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ವಿಚ್ಛೇದನ ಆದ ಮೇಲೂ ನೀವು ಆಕೆ ಮರು ಮದುವೆ ಆಗುವವರೆಗೆ, ಅಥವಾ ಆಕೆ ಮೃತ ಹೊಂದುವವರೆಗೆ ಜೀವನಾಂಶ ಕೊಡಬೇಕಾಗುತ್ತದೆ.

ನಿಮ್ಮ ಮಗ ನಿಮಗೆ ಕೊಡುತ್ತಿರುವ ಹಣವನ್ನು ಯಾವಾಗ ಬೇಕಾದರೂ ನಿಲ್ಲಿಸಬಹುದು. ನಿಮಗೆ ಬೇರೆ ಗತಿ ಇಲ್ಲ ಎನ್ನುವದನ್ನು ಸಾಬೀತು ಪಡಿಸಿದಾಗ ಮಾತ್ರ ನ್ಯಾಯಾಲಯ ನಿಮ್ಮ ಮಗ ನಿಮಗೆ ಜೀವನಾಂಶ ಕೊಡುವಂತೆ ಆದೇಶ ಮಾಡುತ್ತದೆ. ಈ ವಯಸ್ಸಿನಲ್ಲಿ ನೀವು ನ್ಯಾಯಾಲಯದ ಮೆಟ್ಟಿಲು ಏರುವುದಕ್ಕೆ ಬದಲಿಗೆ ಯಾವುದಾದರೂ ಕೌನ್ಸೆಲರ್/ವಿವಾಹ ಸಂಧಾನಕಾರರ ಹತ್ತಿರ ಕೂತು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು. ಕೋರ್ಟು ಕಚೇರಿಗೆ ತಿರುಗಿ, ವೃಥಾ ಹಣ, ಶಕ್ತಿ ಖರ್ಚು ಮಾಡಿ ಉಳಿದ ಆಯುಷ್ಯದ ದಿನಗಳ ಮೌಲ್ಯವನ್ನು ಕಳೆದುಕೊಳ್ಳಬೇಡಿ.

ವಿಚ್ಛೇದನ ಪಡೆಯುವುದರಿಂದ ನಿಮಗೆ ಯಾವ ಲಾಭವಿದೆ ಎಂದು ಯೋಚಿಸಿ. ಮುಂದೆ ಯಾರನ್ನಾದರೂ ಮದುವೆ ಆದರೆ,ಯಾವ ಸಮಸ್ಯೆಯೂ ಬರುವುದೇ ಇಲ್ಲವೇ ಎನ್ನುವುದನ್ನೂ ಯೋಚಿಸಿ. ಥವಾ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡಲು ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಅರ್ಜಿ ಕೊಡಿ. ಅಲ್ಲಿ ನಿಮ್ಮ ಪತ್ನಿ ಮತ್ತು ಮಗನನ್ನು ಕರೆಸಿ ನಿಮ್ಮ ಸಮಸ್ಯೆ ಬಗೆಹರಿಯಲು ಸಹಾಯ ಮಾಡಬಹುದು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net