ಬಿಹಾರದಲ್ಲಿ ಏನಿದು ಪಾಲಿಟಿಕ್ಸ್​? ನಿನ್ನೆವರೆಗೂ ಟೀಕಿಸ್ತಿದ್ದ 'ಚುನಾವಣಾ ಚಾಣಕ್ಯ' ಸಿಎಂ ಜತೆ ಗಪ್​ಚುಪ್​ ಭೇಟಿ!

prashanth
Published on

ಪಟ್ನಾ (ಬಿಹಾರ): ರಾಜಕೀಯದಲ್ಲಿ ಪಕ್ಷಾಂತರ ಮಾಮೂಲಿಯಾಗಿದ್ದರೂ, ಬಿಹಾರ ರಾಜಕೀಯದಲ್ಲಿ ಇದೀಗ ಕುತೂಹಲದ ಘಟನೆ ನಡೆದಿದೆ. ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ, ಕಾಂಗ್ರೆಸ್ ಹಾಗೂ ಇತರ ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ನಿತೀಶ್​ ಕುಮಾರ್​ ಸರ್ಕಾರದಲ್ಲಿ ದಿನೇ ದಿನೇ ಕುತೂಹಲದ ಬೆಳವಣಿಗೆ ನಡೆಯುತ್ತಿದೆ. ಒಂದೆಡೆ ಆರ್​ಜೆಡಿ ತೊರೆದು ಬಿಜೆಪಿಯ ಕೈ ಹಿಡಿಯುತ್ತಿರುವವರ ಸಂಖ್ಯೆ ಏರುತ್ತಿರುವ ನಡುವೆಯೇ, ಇನ್ನೊಂದೆಡೆ, ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ಸಿಎಂ ನಿತೀಶ್​ ಕುಮಾರ್​ ಅವರನ್ನು ಭೇಟಿಯಾಗಿದ್ದಾರೆ!

ಚುನಾವಣಾ ತಂತ್ರಗಾರ ಎಂದು ಕರೆಸಿಕೊಳ್ಳುತ್ತಿರುವ ಪ್ರಶಾಂತ್ ಕಿಶೋರ್, ನಿನ್ನೆಯವರೆಗೂ ನಿತೀಶ್ ಕುಮಾರ್ ಮತ್ತು ಅವರ ನೀತಿಗಳ ವಿರುದ್ಧ ಧ್ವನಿ ಎತ್ತಿದ್ದರು. ನಿತೀಶ್​ ಕುಮಾರ್​ ಅವರ ಬಗ್ಗೆ ಟೀಕಿಸುತ್ತಲೇ ಬಂದಿದ್ದರು. ಅವರ ಜತೆ ತಾವು ಗುರುತಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದರು. ಆದರೆ ಈಗ ಕುತೂಹಲದ ಬೆಳವಣಿಗೆಯಲ್ಲಿ ಅವರು ನಿತೀಶ್​ ಕುಮಾರ್​ ಅವರನ್ನು ಭೇಟಿ ಮಾಡಿದ್ದಾರೆ!

ಪಟ್ನಾದಲ್ಲಿರುವ ಮುಖ್ಯಮಂತ್ರಿಗಳ ಕಚೇರಿ 'ಏಕ್ ಅಣ್ಣಾ ಮಾರ್ಗ್'ನಲ್ಲಿ ಇವರಿಬ್ಬರೂ ಭೇಟಿಯಾಗಿದ್ದು, ಎರಡು ಗಂಟೆಗೂ ಅಧಿಕ ಸಮಯದವರೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆರ್​ಜೆಡಿ ಬಿಟ್ಟು ಬಿಜೆಪಿ ಜತೆ ನಿತೀಶ್​ಕುಮಾರ್​ ಮೈತ್ರಿ ಮಾಡಿಕೊಂಡಿದ್ದರಿಂದ ದೂರ ಸರಿದಿದ್ದ ನಾಯಕರು, ಈಗ ಮತ್ತೆ ನಿತೀಶ್​ ಅವರ ಬಳಿ ಬರುತ್ತಿರುವ ನಡುವೆಯೇ ಪ್ರಶಾಂತ್​ ಕಿಶೋರ್​ ಅವರ ಈ ನಡೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದಾಗಲೇ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಜತೆಯಲ್ಲಿಯೂ ಕೆಲಸ ಮಾಡಿರುವ ಪ್ರಶಾಂತ್​ ಕಿಶೋರ್​, ಈಗ ಪುನಃ ಬಿಹಾರದಲ್ಲಿನ ಮಹಾಘಟಬಂಧನದ ಜತೆ ಸೇರಿ ಚುನಾವಣಾ ರಣತಂತ್ರ ರೂಪಿಸಬಹುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಜೆಡಿಯು ಸಂಸದರಾಗಿದ್ದ ಆರ್‌ಸಿಪಿ ಸಿಂಗ್‌ ಅವರ ಜತೆಗಿನ ಮುನಿಸಿನಿಂದಾಗಿ ಪ್ರಶಾಂತ್ ಕಿಶೋರ್ ಜೆಡಿಯುನಿಂದ ಹೊರನಡೆದಿದ್ದರು. ಆದರೆ ಈಗ ಆರ್‌ಸಿಪಿ ಸಿಂಗ್ ಜೆಡಿಯು ಬಿಟ್ಟ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರಶಾಂತ್ ಕಿಶೋರ್ ಜೆಡಿಯು ಜತೆ ಸಂಪರ್ಕ ಸಾಧಿಸಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆಯೇ, ಜೆಡಿಯುನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪವನ್ ವರ್ಮ ಕೂಡ ಪಟ್ನಾ ತಲುಪಿದ್ದು, ನಿತೀಶ್​ ಕುಮಾರ್​ ಜತೆ ಮಾತುಕತೆ ನಡೆಸಿದ್ದಾರೆ. ದೇಶಾದ್ಯಂತ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ನಿತೀಶ್‌ ಕುಮಾರ್‌ ಅಭಿಯಾನದ ಕುರಿತು ಈ ಮೂವರೂ ಸೇರಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net