

ನವದೆಹಲಿ: ಬಿಜೆಪಿಯ ಮಾಜಿ ಸಂಸದ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ದೆಹಲಿ ಬಂಗಲೆಯನ್ನು ಇನ್ನು ಆರು ವಾರಗಳಲ್ಲಿ ಖಾಲಿ ಮಾಡಬೇಕಿದೆ. ಇದಕ್ಕೆ ಕಾರಣ, ಬಂಗಲೆಯನ್ನು ತೆರವು ಮಾಡುವಂತೆ ದೆಹಲಿ ಹೈಕೋರ್ಟ್ ಸ್ವಾಮಿ ಅವರಿಗೆ ಆದೇಶಿಸಿದೆ.
ಸುಬ್ರಮಣಿಯನ್ ಸ್ವಾಮಿ ಅವರು ಸಂಸದರಾಗಿದ್ದ ಅವಧಿಯಲ್ಲಿ 2016ರ ಜನವರಿಯಲ್ಲಿ 5 ವರ್ಷಗಳ ಕಾಲ ದೆಹಲಿಯಲ್ಲಿ ಅವರಿಗೆ ಬಂಗಲೆ ಮಂಜೂರು ಮಾಡಲಾಗಿತ್ತು. ಇದೇ ಏಪ್ರಿಲ್ನಲ್ಲಿ ಅವರ ರಾಜ್ಯಸಭಾ ಅಧಿಕಾರಾವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಅವರು ಬಂಗಲೆಯನ್ನು ತೆರವು ಮಾಡಬೇಕಿತ್ತು.
ಆದರೆ ಅವರು ಅವಧಿ ಮುಗಿದರೂ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಇದೀಗ ತಮಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಇದೇ ಬಂಗಲೆಯಲ್ಲಿ ಮುಂದುವರೆಯಲು ಅನುಮತಿ ನೀಡಿ ಎಂದು ಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ ಈ ವಾದವನ್ನು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಮಾನ್ಯ ಮಾಡಲಿಲ್ಲ. "ನಿಮಗೆ ಬಂಗಲೆಯನ್ನು ಐದು ವರ್ಷಗಳವರೆಗೆ ಮಂಜೂರು ಮಾಡಲಾಗಿದ್ದು, ಅವಧಿ ಮುಗಿದಿದೆ. ಜೀವ ಬೆದರಿಕೆ ಇದ್ದು ರಕ್ಷಣೆಯ ಅವಶ್ಯಕತೆ ಇದೆ ಎಂಬ ಬಗ್ಗೆ ಸದ್ಯ ಯಾವುದೇ ವಿಷಯ ಕೋರ್ಟ್ ಗಮನಕ್ಕೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ ಅರ್ಜಿಯನ್ನು ಮಾನ್ಯ ಮಾಡಲಾಗುವುದಿಲ್ಲ' ಎಂದು ಕೋರ್ಟ್ ಹೇಳಿದೆ.
ಕೋರ್ಟ್ ಆದೇಶದಿಂದಾಗಿ ಈಗ ಸುಬ್ರಮಣಿಯನ್ ಸ್ವಾಮಿ ಅವರು ಇನ್ನು ಆರು ವಾರಗಳಲ್ಲಿ ಬಂಗಲೆ ತೆರವು ಮಾಡಬೇಕಿದೆ (ಏಜೆನ್ಸೀಸ್)