

ಇಂದೋರ್: ಕರೊನಾಮ, ರೂಪಾಂತರಿ ಕರೊನಾ ನಂತರ ಇದೀಗ ಇಡೀ ದೇಶವನ್ನು ತಲ್ಲಣಕ್ಕೆ ತಳ್ಳಿರುವುದು ಹಕ್ಕಿಜ್ವರ. ಇದಾಗಲೇ ಕರ್ನಾಟಕದ ಕೆಲವು ಕಡೆಗಳಲ್ಲಿ ಕಾಗೆ ಸೇರಿದಂತೆ ಕೆಲವು ಪಕ್ಷಿಗಳ ಸತ್ತುಬಿದ್ದು, ಅವುಗಳ ಪರೀಕ್ಷೆ ನಡೆಯಬೇಕಿದೆ.
ಆದರೆ ಇದರ ಬೆನ್ನಲ್ಲೇ ಮಧ್ಯಪ್ರದೇಶದ ಎರಡು ಜಿಲ್ಲೆಗಳಲ್ಲಿ ಕೋಳಿಗಳ ಎರಡು ಮಾದರಿಗಳಲ್ಲಿ ಪಕ್ಷಿಜ್ವರ ದೃಢಪಟ್ಟಿದ್ದು, ಅವುಗಳಿಂದಲೇ ಕೋಳಿಗಳು ಸತ್ತಿರುವುದು ವರದಿಯಾಗಿದೆ. ರಾಜ್ಯದಲ್ಲಿ ಕೋಳಿ ಸಾಕಣೆಯಲ್ಲಿ ಪಕ್ಷಿ ಜ್ವರ ಬಂದ ಮೊದಲ ಉದಾಹರಣೆ ಇದು.
ಇಂದೋರ್ ಮತ್ತು ನೀಮುಚ್ ಜಿಲ್ಲಾ ಆಡಳಿತಗಳು ಕೋಳಿಗಳ ಮಾದರಿಗಳನ್ನು ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ನ (ಎನ್‌ಐಎಚ್‌ಎಸ್‌ಎಡಿ) ಪ್ರಯೋಗಾಲಯಕ್ಕೆ ಕಳೆದ ಬುಧವಾರ ಕಳುಹಿಸಿತ್ತು. ಇದರ ವರದಿ ಇದೀಗ ಕೈ ಸೇರಿರುವುದಾಗಿ ಪಶುಸಂಗೋಪನಾ ವಿಭಾಗದ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದೋರ್ ಮತ್ತು ನೀಮುಚ್‌ನ ಪೀಡಿತ ಪ್ರದೇಶಗಳ 1 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಅಂಗಡಿಗಳನ್ನು ಏಳು ದಿನಗಳವರೆಗೆ ಮುಚ್ಚಲು ಮಧ್ಯಪ್ರದೇಶ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
"ಎರಡು ದಿನಗಳ ಹಿಂದೆ, ನೀಮಚ್ನಲ್ಲಿ 40 ಕಾಗೆಗಳು ಸತ್ತವು, ಆದರೆ ಕಾಗೆಗಳಲ್ಲಿ ಪಕ್ಷಿ ಜ್ವರ ಇನ್ನೂ ದೃಢಪಟ್ಟಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ, ನೀಮುಚ್‌ನಲ್ಲಿರುವ ಎಲ್ಲಾ ಮಾಂಸ ಮತ್ತು ಮೊಟ್ಟೆಗಳ ಅಂಗಡಿಗಳನ್ನು ಮುಚ್ಚಲು ನಾವು ಆದೇಶಿಸಿದ್ದೇವೆ ”ಎಂದು ನೀಮುಚ್‌ನ ಜಿಲ್ಲಾಧಿಕಾರಿ ಜಿತೇಂದ್ರ ಸಿಂಗ್ ರಾಜೇ ಹೇಳಿದರು.