VIDEO: ಮದುವೆಯೇ ಬೇಡ ಎಂದಿದ್ದಾಕೆ ಕಂಡಳು 100ನೇ ಮರಿ ಮರಿಮೊಮ್ಮಗು! 99ರ ವೃದ್ಧೆಯ ಇಂಟರೆಸ್ಟಿಂಗ್​ ಸ್ಟೋರಿ...

child1
Published on

ಪೆನ್ಸಿಲ್ವೇನಿಯಾ (ಅಮೆರಿಕ): ಈ ಚಿತ್ರದಲ್ಲಿ ಕಾಣಿಸುತ್ತಿರುವಾಕೆಯ ಹೆಸರು ಮಾರ್ಗರೇಟ್ ಕೊಲ್ಲರ್. ಅಮೆರಿಕ ಪೆನ್ಸಿಲ್ವೇನಿಯಾದ ಈಕೆಗೆ ಈಗ 99 ವರ್ಷ ವಯಸ್ಸು. ಇವಳ ಕೈಯಲ್ಲಿ ಇರುವುದು ಈಕೆಯ ಮರಿ ಮೊಮ್ಮಗ. ಅಂದರೆ ಈ ವೃದ್ಧೆಯ ಮಗನ ಮಗಳ ಮಗ. 100ನೇ ವಯಸ್ಸಿಗೆ ಕಾಲಿಡುತ್ತಿರುವ ವೃದ್ಧೆಯ ಕೈಯಲ್ಲಿ ಬೆಚ್ಚಗೆ ಮಲಗಿರುವುದು ಈಕೆಯ 100ನೇ ಮರಿಮೊಮ್ಮಗ!

ಅಂದಹಾಗೆ ಮಾರ್ಗರೇಟ್ ಕೊಲ್ಲರ್ ಜೀವನ ಚರಿತ್ರೆಯೇ ಕುತೂಹಲವಾದದ್ದು. ಕ್ರೈಸ್ತ ನನ್ ಆಗಿದ್ದ ಮಾರ್ಗರೇಟ್​ ಯುವತಿಯಾಗಿದ್ದಾಗ ಮದುವೆಯೇ ಬೇಡ ಎಂದಿದ್ದಳು. 1922ರಲ್ಲಿ ಹುಟ್ಟಿದ್ದ ಈಕೆ ಮದುವೆ, ಮಕ್ಕಳು ಎಲ್ಲದರಿಂದಲೂ ದೂರ ಹೋಗಬೇಕು ಎಂದು ಬಯಸಿದ್ದಳು. ಆದರೆ ಈಕೆಗೆ ಕಂಕಣಭಾಗ್ಯ ತಾನಾಗಿಯೇ ಒಲಿದು ಬಂದಿತ್ತು. ವಿಲಿಯಂ ಎಂಬುವರನ್ನು ಭೇಟಿಯಾದ ಮಾರ್ಗರೇಟ್​ ಜೀವನದಲ್ಲಿ ತಿರುವು ಉಂಟಾಯಿತು. ವಿಲಿಯಂ ಜತೆ ಪ್ರೇಮ ಹುಟ್ಟಿತು. ಪರಸ್ಪರದ ಪ್ರೇಮದ ಸೆಲೆಯಲ್ಲಿ ಬಿದ್ದು, ಕೊನೆಗೆ ಮದುವೆಯಾದರು.

ಮದುವೆಯಾದ ಮೇಲೆ ಈ ದಂಪತಿಗೆ ಹುಟ್ಟಿದ್ದು, 11 ಮಕ್ಕಳು! ಈ ಮಕ್ಕಳಿಗೆ ಒಟ್ಟೂ ಹುಟ್ಟಿದ್ದು 56 ಮಕ್ಕಳು. ಅಂದರೆ ಮಾರ್ಗರೇಟ್ ಕೊಲ್ಲರ್​ಗೆ 56 ಮೊಮ್ಮಕ್ಕಳು. ಈ 56 ಮೊಮ್ಮಕ್ಕಳಿಗೆ ಮಕ್ಕಳಾಗಿದ್ದು, ಅವರಲ್ಲಿ ಈ ಪುಟಾಣಿ 100ನೆಯದ್ದು. ಮಗುವಿಗೆ ಮುತ್ತಜ್ಜಿಯ ಕೊಲ್ಲರ್ ಎನ್ನುವ ಹೆಸರನ್ನೂ ಸೇರಿಸಿ ಕೊಲ್ಲರ್​ ವಿಲಿಯಮ್ ಬಾಲ್​ಸ್ಟರ್ ಎಂದು ನಾಮಕರಣ ಮಾಡಲಾಗಿದೆ.

ಈಗ ಈ ಮುತ್ತಜ್ಜಿಯ 100ನೇ ವರ್ಷವನ್ನು ವಿಜೃಂಭಣೆಯಿಂದ ಆಚರಿಸಲು ಕುಟುಂಬಸ್ಥರು ರೆಡಿಯಾಗಿದ್ದಾರೆ (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ: ಕೃಪೆ- NBC10 Philadelphia

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net