ಅಪಾಯದಲ್ಲಿದೆ 18 ಕೋಟಿ ಜನರ ಪ್ಯಾನ್‌ ಕಾರ್ಡ್‌- ಏಕೆ ಗೊತ್ತಾ?

PAN
Published on

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಕಡ್ಡಾಯವಾಗಿ ಎಲ್ಲರಿಗೂ ಪ್ಯಾನ್‌ ಕಾರ್ಡ್‌ (ಪರ್ಮನೆಂಟ್‌ ಅಕೌಂಟ್‌ ನಂಬರ್‌) ಮತ್ತು ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡುವಂತೆ ಮೇಲಿಂದ ಮೇಲೆ ಹೇಳುತ್ತಲೇ ಬಂದಿದೆ.

ಆದರೆ ಇದುವರೆಗೂ ಎಷ್ಟೋ ಮಂದಿ ಇದನ್ನು ಕಿವಿಯ ಮೇಲೆ ಹಾಕಿಕೊಂಡಿಲ್ಲ. ಕರೊನಾ, ಲಾಕ್‌ಡೌನ್‌ ಸೇರಿದಂತೆ ಅನೇಕ ಕಾರಣಗಳಿಂದ ಈಗಾಗಲೇ ಹಲವಾರು ಬಾರಿ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ಗಳನ್ನು ಲಿಂಕ್‌ ಮಾಡುವ ದಿನಾಂಕವನ್ನು ಮುಂದೂಡುತ್ತಲೇ ಬಂದಿದೆ.

ಆದರೆ ಇದೀಗ ಕೊನೆಯ ವಾರ್ನಿಂಗ್‌ ಆಗಿ 2021ರ ಮಾರ್ಚ್‌ 31ರವರೆಗೆ ಗಡುವು ನೀಡಲಾಗಿದೆ. ಇನ್ನೂ ಅನೇಕ ತಿಂಗಳು ಇದೆಯಲ್ಲ ಬಿಡಿ, ಆಗ ಮಾಡಿದರಾಯಿತು ಎಂದು ತಾತ್ಸಾರ ತೋರದೇ ಈಗಲೇ ಇವೆರಡು ದಾಖಲೆಗಳನ್ನು ಜೋಡಿಸುವಂತೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಏಕೆಂದರೆ ಇಲ್ಲಿಯವರೆಗೆ 18 ಕೋಟಿಗೂ ಅಧಿಕ ಮಂದಿ ಇವುಗಳ ಜೋಡಣೆ ಮಾಡಿಲ್ಲ ಎಂದು ಇಲಾಖೆ ಹೇಳಿದೆ.

ಎಲ್ಲಾ ಚಟುವಟಿಕೆ, ವ್ಯವಹಾರಗಳಿಗೆ ಇವುಗಳ ಜೋಡಣೆ ಅತ್ಯಗತ್ಯವಾಗಿದ್ದು, ಒಂದು ವೇಳೆ ಇವುಗಳ ಜೋಡಣೆ ಆಗದೇ ಹೋದಲ್ಲಿ ಯಾವುದೇ ವ್ಯವಹಾರಗಳು ನಡೆಸಲು ಸಾಧ್ಯವಿಲ್ಲವಾಗಿದೆ. ಅದ್ದರಿಂದ ಕೂಡಲೇ ಜೋಡಣೆ ಮಾಡುವಂತೆ ಸರ್ಕಾರ ಸೂಚಿಸಿದೆ.

ಇಲ್ಲಿಯವರೆಗೆ 32.71 ಕೋಟಿ ಪ್ಯಾನ್‌ ಕಾರ್ಡ್‌ಗಳು ಆಧಾರ್ ಜತೆ ಲಿಂಕ್ ಆಗಿದ್ದರೆ ಲಿಂಕ್‌ ಆಗದೇ ಇರುವವರ ಸಂಖ್ಯೆ 18 ಕೋಟಿ ಇದೆ! ಒಂದು ವೇಳೆ ಬರುವ ಮಾರ್ಚ್‌ ಅಂದರೆ 2021ರ ಮಾರ್ಚ್ 31ರ ಒಳಗೆ ಲಿಂಕ್‌ ಆಗದೇ ಹೋದರೆ ಪ್ಯಾನ್‌ ಕಾರ್ಡ್‌ ನಿಷ್ಕ್ರೀಯಗೊಳ್ಳಲಿದ್ದು, ಮುಂದೆ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಶೇ. 57ರಷ್ಟು ಜನರ ಆದಾಯವು 2.5 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿದೆ. ಅಂಕಿಅoಶಗಳ ಪ್ರಕಾರ, ಶೇ.18ರಷ್ಟು ಮಂದಿ ಆದಾಯ 2.5ರಿಂದ 5 ಲಕ್ಷ ರೂಪಾಯಿಗಳು, ಶೇ. 17ರಷ್ಟು ಮಂದಿ ಆದಾಯವು 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಗಳು ಮತ್ತು ಶೇ. ಏಳರಷ್ಟು ಮಂದಿ ಆದಾಯವು 10 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಗಳವರೆಗೆ ಇದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರಲ್ಲಿ ಶೇ.ಒಂದರಷ್ಟು ಮಾತ್ರ 50 ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net