ಜನರ ಜೀವನದ ಜತೆ ಚೆಲ್ಲಾಟವಾಗಿ ಕ್ಷಿಪಣಿ ಸಕ್ಸಸ್​ ಎಂದು ಬೀಗಿದ ಪಾಕಿಸ್ತಾನ!

pak-missile
Published on

ಕರಾಚಿ: ಪಾಕಿಸ್ತಾನ ಸೇನೆಯು ಪರಮಾಣು-ಸಾಮರ್ಥ್ಯದ ಮೇಲ್ಮೈಯಿಂದ ಮೇಲ್ಮೈಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಹೇಳಿಕೊಂಡಿದೆ. ಶಾಹೀನ್ -3 ಎಂಬ ಹೆಸರಿನ ಕ್ಷಿಪಣಿ ಇದಾಗಿದ್ದು, ಕನಿಷ್ಠ 2,750 ಕಿಲೋ ಮೀಟರ್​ ದೂರದವರೆಗೆ ಇದು ಚಿಮ್ಮಲಿದೆ ಎಂದು ಹೇಳಿದೆ.

ಕಳೆದ ಸಲ, ಗರಿಷ್ಠ 650 ಕಿ.ಮೀ ಗುರಿ ತಲುಪುವ ಶಾಹೀನ್‌-1 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾ­ಗಿದೆ ಎಂದು ಪಾಕಿಸ್ತಾನ ಹೇಳಿತ್ತು. ನಂತರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಪಾಕಿಸ್ತಾನ ಶಾಹೀನ್ 2 ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ನಡೆಸಿ ಇದು ಭಾರತದ ನೂತನ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ಎಂದು ಹೇಳಿತ್ತು. ಇದೀಗ ಶಾಹೀನ್​-3 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಹೇಳಿದೆ.

ಆದರೆ ಪಾಕಿಸ್ತಾನಕ್ಕೆ ಭಾರಿ ಮುಖಭಂಗ ಆಗುವ ಹೇಳಿಕೆಯನ್ನು ಬಲೂಚಿಸ್ತಾನದ ಅತ್ಯಂತ ಪ್ರಭಾವಶಾಲಿ ರಾಜಕೀಯ ಪಕ್ಷಗಳಲ್ಲಿ ಒಂದಾದ ಬಲೂಚ್ ರಿಪಬ್ಲಿಕನ್ ಪಕ್ಷ (ಬಿಆರ್​ಪಿ) ಹೇಳಿದೆ. ಇದರ ಪ್ರಕಾರ, ಪಾಕಿಸ್ತಾನ ಸೇನೆಯ ಶಾಹೀನ್ -3 ಕ್ಷಿಪಣಿಯನ್ನು ಯಶಸ್ವಿಯಾಗಿ ಹಾರಿಸಿದೆ ಎನ್ನುವುದು ಶುದ್ಧ ಸುಳ್ಳು. ಇದು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದೆ.

ಪಾಕಿಸ್ತಾನದ ಕರಾಳ ಮುಖವನ್ನು ಬಹಿರಂಗಪಡಿಸಿರುವ ಬಲೂಚ್ ರಿಪಬ್ಲಿಕನ್ ಪಕ್ಷ, ಪಾಕಿಸ್ತಾನವು ನಾಗರಿಕರು ವಾಸವಿರುವ ಪ್ರದೇಶಗಳ ಕಡೆ ಕ್ಷಿಪಣಿಯ ಪ್ರಯೋಗ ನಡೆಸಿದೆ. ಇದು ಸ್ಫೋಟಗೊಂಡಿರುವ ಪರಿಣಾಮವಾಗಿ ಅನೇಕ ಮನೆಗಳು ನಾಶವಾಗಿವೆ, ಇದರಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ.

ಡೇರಾ ಘಾಜಿ ಖಾನ್‌ನ ರಾಖಿ ಪ್ರದೇಶದಿಂದ ಕ್ಷಿಪಣಿಯ ಹಾರಿಸುವ ಪ್ರಯತ್ನ ಮಾಡಲಾಗಿತ್ತು. ಅಲ್ಲಿರುವ ಭದ್ರತಾ ಸಿಬ್ಬಂದಿಯನ್ನು ಬೇರೆಡೆ ಸ್ಥಳಾಂತರ ಮಾಡಲಾಗಿತ್ತು. ಆದರೆ ವಿಚಿತ್ರ ಎಂದರೆ ಜನನಿಬಿಡ ಪ್ರದೇಶದಲ್ಲಿ ಇದನ್ನು ಪರೀಕ್ಷೆ ಮಾಡುವ ಮೂಲಕ ಹಲವಾರು ಮಂದಿಗೆ ಹಾನಿಗೊಳಿಸಿದೆ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net