

ಇಸ್ಲಾಮಾಬಾದ್: ಫೋಟೋ ಶೂಟ್ ಮಾಡಿಸಿಕೊಳ್ಳುವುದು ಹಲವರಿಗೆ ಭಾರಿ ಇಷ್ಟ. ಈಗಂತೂ ತಮ್ಮಲ್ಲಿರುವ ನಟನಾ ಕೌಶಲವನ್ನು ಜಾಲತಾಣದಲ್ಲಿ ತೋರಿಸುವುದಕ್ಕಾಗಿ ಜಿದ್ದಿಗೆ ಬಿದ್ದವರಂತೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಫೋಟೋಗಾಗಿ ಹುಚ್ಚು ಸಾಹಸಕ್ಕೂ ಕೈಹಾಕುವವರಿಗೆ ಕಮ್ಮಿಯೇನೂ ಇಲ್ಲ.
ಇಂಥದ್ದೇ ಒಂದು ಸಾಹಸಕ್ಕೆ ಕೈಹಾಕಿರುವ ಪಾಕಿಸ್ತಾನದ ಟಿಕ್ಟಾಕ್ ಸ್ಟಾರ್ ಆಕೆ ಅಂದುಕೊಂಡಂತೆ ರಾತ್ರೋರಾತ್ರಿ ಜನಪ್ರಿಯಳಾದರೂ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಫೋಟೋಶೂಟ್ ಮಾಡಿಸಿಕೊಳ್ಳಲು ಈಕೆ ಬೆಟ್ಟಕ್ಕೇ ಬೆಂಕಿ ಇಟ್ಟಿದ್ದಾಳೆ!
ಹುಮೇರಾ ಅಸಗರ್ ಎಂಬಾಕೆ ಇಂಥದ್ದೊಂದು ದುಷ್ಕೃತ್ಯ ಎಸಗಿದ್ದಾಳೆ. ಜಾಲತಾಣದಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಹೊಂದಿರುವ ಈ ಟಿಕ್ಟಾಕ್ ಸ್ಟಾರ್ಗೆ ಏನೋ ಹೊಸತು ಮಾಡಬೇಕು ಎನ್ನಿಸಿದೆ. ಈ ಮೂಲಕ ಭಾರಿ ಜನಪ್ರಿಯತೆ ಗಳಿಸಬೇಕು ಎಂದು ಎನ್ನಿಸಿದೆ.
ಇದೇ ಕಾರಣಕ್ಕೆ ಟಿಕ್ಟಾಕ್ನಲ್ಲಿ ವಿಡಿಯೋ ಮಾಡಿದ್ದಾಳೆ. ಬ್ಯಾಕ್ಗ್ರೌಂಡ್ ಚೆನ್ನಾಗಿ ಇರಲೆಂದು ಬೆಟ್ಟಕ್ಕೆ ಬೆಂಕಿ ಹಚ್ಚಿದ್ದಾಳೆ. ತಾನೊಬ್ಬ ಹಾಟ್ ಸ್ಟಾರ್, ನಾನು ಇರುವ ಕಡೆಗಳಲ್ಲೆಲ್ಲಾ ಕಿಚ್ಚು ತುಂಬಿರುತ್ತದೆ, ನಾನು ಎಲ್ಲಿರುತ್ತೇನೋ ಅಲ್ಲಿ ಬೆಂಕಿ ಸ್ಫೋಟಗೊಳ್ಳುತ್ತದೆ ಎಂದು ಶೀರ್ಷಿಕೆ ಕೊಟ್ಟು ಈ ವಿಡಿಯೋ ಹರಿಬಿಟ್ಟಿದ್ದಾಳೆ.
ಸಿಲ್ವರ್ ಬಾಲ್ ಗೌನ್ ದಿರಿಸಿನಲ್ಲಿ ಬೆಂಕಿಯಿಂದ ಉರಿಯುತ್ತಿರುವ ಬೆಟ್ಟದ ಮುಂದೆ ನಡೆದುಕೊಂಡು ಬರುತ್ತಿರುವ ವಿಡಿಯೋ ಕ್ಲಿಪ್ ಶೇರ್ ಮಾಡಿಕೊಂಡಿದ್ದಾಳೆ. ಬೆಟ್ಟಕ್ಕೆ ಬೆಂಕಿ ಇಟ್ಟು ಪರಿಸರಕ್ಕೆ ಹಾನಿ ಮಾಡಿರುವುದಕ್ಕೆ ಹಲವಾರು ಮಂದಿ ಈಕೆಯ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಆದರೆ ವಿಡಿಯೋ ಮಾತ್ರ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.
ಇಲ್ಲಿದೆ ನೋಡಿ ವಿಡಿಯೋ: