ಸಿಎಂ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಮುದ್ದಹನುಮೇಗೌಡ, ಶಶಿಕುಮಾರ್​, ಅನಿಲ್​ಕುಮಾರ್​

bjp smp sashikumar
Published on

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ‌ ಸಂಸದ ಎಸ್​.ಪಿ. ಮುದ್ದಹನುಮೇಗೌಡ ಮತ್ತು ಚಿತ್ರದುರ್ಗ ಕ್ಷೇತ್ರದ ಮಾಜಿ ಸಂಸದರೂ ಆದ ನಟ ಶಶಿಕುಮಾರ್ ಇಂದು(ಗುರುವಾರ) ಬಿಜೆಪಿ ಸೇರ್ಪಡೆಯಾದರು.

ನಗರದ ಬಿಜೆಪಿ ಕಚೇರಿಯಲ್ಲಿ ಇಬ್ಬರಿಗೂ ಬಿಜೆಪಿ ಶಾಲು ಹೊದಿಸಿ, ಬಿಜೆಪಿ ಬಾವುಟ ಕೈಗೆ ಕೊಟ್ಟು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್​ ಅವರು ಸ್ವಾಗತಿಸಿದರು. ಇದೇ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಕೂಡ ಬಿಜೆಪಿಗೆ ಸೇರ್ಪಡೆಯಾದರು. ಸಚಿವರಾದ ಅಶ್ವಥ್ ನಾರಾಯಣ್, ಎಸ್.ಟಿ. ಸೋಮಶೇಖರ್, ಗೋವಿಂದ ಕಾರಜೋಳ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಶಾಸಕರಾದ ಮಸಾಲೆ ಜಯರಾಂ, ಸಿ.ಪಿ.ಯೋಗೀಶ್ವರ್, ರಾಜ್ಯಸಭಾ ಸದಸ್ಯ ಜಗ್ಗೇಶ್, ರಾಜ್ಯ ಬಿಜೆಪಿ ಸಂಘಟನಾ ಪ್ರದಾನ ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಕೈ ಟಿಕೆಟ್​ ತಪ್ಪಿದ್ದಕ್ಕೆ ಅಸಮಾಧಾನಗೊಂಡ ಮುದ್ದಹನುಮೇಗೌಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಇನ್ನು ನಟ ಶಶಿಕುಮಾರ್ ಅವರು ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಅನಿಲ್ ಕುಮಾರ್ ಅವರು ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net