ಅಜ್ಜನಿಗೆ ಆಕ್ಸಿಜನ್ ಸಿಲಿಂಡರ್ ಬೇಕಾಗಿದೆ ಅಂತ ಟ್ವೀಟ್ ಮಾಡಿದ ಯುವಕನ ವಿರುದ್ಧ ಎಫ್ಐಆರ್!

h20-oxygen
Published on

ಅಮೇಥಿ (ಉತ್ತರ ಪ್ರದೇಶ): ಅಜ್ಜನಿಗಾಗಿ ಯಾರಾದರೂ ಆಕ್ಸಿಜನ್ ಸಿಲಿಂಡರ್‌ ಕೊಡಿ ಎಂದು ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡ ಯುವಕನ ವಿರುದ್ಧ ಉತ್ತರ ಪ್ರದೇಶದ ಅಮೇಥಿ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಈ ಕುರಿತು ಖುದ್ದಾಗಿ ಅಮೆಥಿ ಪೊಲೀಸರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಆಕ್ಸಿಜನ್‌ ಸಿಲಿಂಡರ್‌ ಅಜ್ಜನಿಗೆ ಬೇಕು ಎಂದು ಹೇಳಿಕೊಂಡಿರುವ ಈ ಯುವಕ ಅದರ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಲಿಲ್ಲ. ಎಲ್ಲವೂ ಅಸ್ಪಷ್ಟವಾಗಿದೆ. ಈ ರೀತಿ ಹೇಳುವ ಮೂಲಕ ಸಿಲಿಂಡರ್‌ ಕೊರತೆ ಇದೆ ಎಂದು ಜನರಲ್ಲಿ ಭಯವನ್ನು ಹುಟ್ಟಿಸುವ ಹುನ್ನಾರ ಎಂಬ ಆರೋಪದಡಿ ಎಫ್‌ಐಆರ್‌ ದಾಖಲು ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ರಾಜ್ಯ ಅಥವಾ ಸಾರ್ವಜನಿಕ ನೆಮ್ಮದಿಯನ್ನು ಕದಡುವ ಕೆಲಸ ಮಾಡಿರುವ ಆರೋಪದ ಅಡಿ ಕೇಸನ್ನು ದಾಖಲು ಮಾಡಲಾಗಿದೆ. ಶಶಾಂಕ್‌ ಯಾದವ್‌ ಎಂಬಾತ ನಟ ಸೋನು ಸೂದ್‌ ಅವರನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿ ಹೀಗೆ ಮೆಸೇಜ್‌ ಹಾಕಿದ್ದಾರೆ. ಅದರಲ್ಲಿ ಆಕ್ಸಿಜನ್‌ ಸಿಲಿಂಡರ್‌ ಬೇಕು ಎಂದಿದ್ದಾರೆಯೇ ವಿನಾ, ಕರೊನಾದ ಕಾರಣವೇ ಅಥವಾ ಇನ್ನಾವ ಉದ್ದೇಶಕ್ಕಾಗಿಯೇ ಅಥವಾ ಅಜ್ಜ ಎಲ್ಲಿ ಅಡ್ಮಿಟ್‌ ಆಗಿದ್ದಾರೆ ಎಂಬ ಯಾವ ಮಾಹಿತಿಯನ್ನೂ ಟ್ವೀಟ್‌ನಲ್ಲಿ ಉಲ್ಲೇಖಿಸಿಲ್ಲ.

ಏಕೆಂದರೆ ಈ ರೀತಿ ಟ್ವೀಟ್‌ ಮಾಡಿರುವಾಗನಿಗೆ ಸಹಾಯಕ್ಕಾಗಿ ಕರೆ ಮಾಡಿದರೆ ಆತ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಆದ್ದರಿಂದ ಇದು ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮಾಡಿರುವ ಟ್ವೀಟ್‌ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಶಶಾಂಕ್‌ ಅವರ ಈ ಟ್ವೀಟ್‌ ಅನ್ನು ಅವರ ಸ್ನೇಹಿತರಲ್ಲೊಬ್ಬರಾದ ಅಂಕಿತ್ ರೀಟ್ವೀಟ್‌ ಮಾಡಿದ್ದಾರೆ. ಜತೆಗೆ ಆಕ್ಸಿಜನ್‌ ಸಿಲಿಂಡರ್‌ ಬೇಕು ಎಂದು ‘ದಿ ವೈರ್‌’ ಪತ್ರಿಕೆಯ ಹಿರಿಯ ಸಂಪಾದಕ ಅರ್ಫಾ ಖಾನೂಮ್ ಶೆರ್ವಾನಿ ಅವರಿಗೆ ಸಹಾಯ ಕೋರಿ ನೇರ ಸಂದೇಶವನ್ನು ಕಳುಹಿಸಿದ್ದಾರೆ. ಟ್ವೀಟ್‌ನಲ್ಲಿ ಸ್ಪಷ್ಟ ಚಿತ್ರಣವೇ ಇಲ್ಲದೇ ಮಾಡಿರುವ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ ಪೊಲೀಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net