

ವಾಷಿಂಗ್ಟನ್: ಮರ್ಲಿನ್ ಮನ್ರೋ... ಯಾರಿಗೆ ತಾನೇ ಈ ಹೆಸರು ಗೊತ್ತಿಲ್ಲ? ಅಮೆರಿಕದ ನಟಿ, ಗಾಯಕಿ ಮತ್ತು ರೂಪದರ್ಶಿಯಾಗಿದ್ದ .ಈಕೆ 50ರ ದಶಕದಿಂದಲೂ ಜಗತ್ಪ್ರಸಿದ್ಧಿ ಹೊಂದಿದಾಕೆ. ಅದರಲ್ಲಿ 1954ರಲ್ಲಿ ಈಕೆ ಕೊಟ್ಟ ಒಂದು ಪೋಸ್ನಿಂದ ರಾತ್ರೋರಾತ್ರಿ ಮನೆಮಾತಾದವಳು.
ಸಬ್‌ವೇ ಗ್ರೇಟ್ ಒಂದರ ಮೇಲೆ ನಿಂತುಕೊಂಡು ಈಕೆ ಕೊಟ್ಟಿರುವ ಪೋಸ್ ಇಂದಿಗೂ ಎಲ್ಲೆಡೆ ಕಾಣಬಹುದಾಗಿದೆ. ಹಲವಾರು ಮಂದಿಯ ಮನೆಗಳ ಗೋಡೆಗಳ ಮೇಲೆಯೂ ಈಕೆಯ ಇದೇ ಭಂಗಿಯ ಫೋಟೋ ಇದ್ದರೆ, ಹಲವಾರು ಕಡೆಗಳಲ್ಲಿ ಇದೇ ಭಂಗಿಯ ಮೂರ್ತಿಗಳನ್ನೂ ಕೆತ್ತಲಾಗಿದೆ.
ಕೇವಲ 36 ವರ್ಷ ಬದುಕಿದ್ದ ಈ ಮಾದಕನಟಿ ಅಷ್ಟು ಚಿಕ್ಕವಯಸ್ಸಿನಲ್ಲಿಯೇ ಇಷ್ಟೊಂದು ವಿಖ್ಯಾತಿ ಗಳಿಸಿದ್ದಳು. ಇವಳ ಇದೇ ರೀತಿಯ ಪೋಸ್ನಂತ ತಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಹಪಹಪಿಸುವವರು ಸಹಸ್ರಾರು ಮಂದಿ. ಆದರೆ ಆ ಪೋಸ್ ಮಾತ್ರ ಇದುವರೆಗೂ ಯಾರಿಂದಲೂ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
ಆದರೆ ಗೂಬೆಯೊಂದು ಇದೀಗ ಫೋಟೋಗೆ ಪೋಸ್ ನೀಡಿದ್ದು, ಅದು ಮರ್ಲಿನ್ ಮನ್ರೋಳನ್ನೇ ನೆನಪಿಸುವಂತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ. ಹಾಗೆ ನೋಡಿದರೆ ಮರ್ಲಿನ್ ನಿಂತ ಭಂಗಿಗೂ ಈ ಗೂಬೆ ಕುಳಿತ ಭಂಗಿಗೂ ಅಂಥದ್ದೇನು ಹೋಲಿಕೆಯಿಲ್ಲ. ಆದರೆ ಕೆಲ ಸೆಕೆಂಡುಗಳ ಕಾಲ ಮರ್ಲಿನ್ ಪೋಸ್ ಕೊಟ್ಟ ಜಾಗದ ಸಮೀಪ ಕೂತಲ್ಲೇ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಅನೇಕ ಮಂದಿಯ ಕಣ್ಣಿಗೆ ಮರ್ಲಿನ್ನನ್ನು ನೆನಪಿಸುತ್ತಿದೆಯಂತೆ.
ಖುದ್ದು ಮನುಷ್ಯರಲ್ಲೇ ಸಾಕಷ್ಟು ಮಂದಿ ಇದೇ ಪೋಸ್ ಅನ್ನು ಅನುಕರಿಸಲು ವಿಫಲರಾಗಿರುವಾಗ ಗೂಬೆಯೊಂದು ಹೀಗೆ ಪರ್ಫೆಕ್ಟ್ ಆಗಿ ಪೋಸ್ ಕೊಟ್ಟಿದೆ ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. 37 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಗೂಬೆಯು ತನ್ನ ರೆಕ್ಕೆಗಳನ್ನು ಸೊಗಸಾಗಿ ಹರಡಿರುವುದನ್ನು ಇಲ್ಲಿ ನೋಡಬಹುದಾಗಿದೆ.