ತೈಲ ಸಂಸ್ಕರಣಾ ಘಟಕದಲ್ಲಿ ಭಯಾನಕ ಸ್ಫೋಟ: ಮುಗಿಲಿಗೆ ಚಿಮ್ಮಿದ ಅಗ್ನಿಯ ಜ್ವಾಲೆ: ಹಲವರು ನಾಪತ್ತೆ

fire
Published on

ಜಕಾರ್ತಾ: ಕಚ್ಚಾ ತೈಲ ಸಂಸ್ಕರಣಾ ಘಟಕದಲ್ಲಿ ಭಾರಿ ಅಗ್ನಿದುರಂತ ಸಂಭವಿಸಿದ ಘಟನೆ ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ನಡೆದಿದೆ.

ಸ್ಫೋಟದ ತೀವ್ರತೆಗೆ ಓರ್ವ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಪ್ರಾಥಮಿಕ ಮಾಹಿತಿ ಪ್ರಕಾರ 10 ಮಂದಿ ನಾಪತ್ತೆಯಾಗಿದ್ದು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಿನ್ನೆ ನಡುರಾತ್ರಿ ಈ ಘಟನೆ ನಡೆದಿದೆ. ಪಶ್ಚಿಮ ಜಾವಾದ ಬಲಂಗಾನ್‌ನಲ್ಲಿರುವ ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಕಂಪನಿ ಪೆರ್ಟಾಮಿನಾದ ಘಟಕದಲ್ಲಿ ಈ ಅನಾಹುತ ಸಂಭವಿಸಿದೆ. ಘಟಕವು ಸ್ಫೋಟಗೊಂಡು ಹೊತ್ತಿ ಉರಿದಿದೆ. ಇಲ್ಲಿ ಸ್ಫೋಟ ಸಂಭವಿಸಿದ್ದು ಹೇಗೆ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿಡಿಲಿನಿಂದ ತೈಲ ಘಟಕ ಸ್ಫೋಟಗೊಂಡಿರಬಹುದು ಎಂದು ಅಂದಾಜು ಮಾಡಲಾಗಿದೆ.

ಆರಂಭದಲ್ಲಿ ತೈಲ ಸಂಗ್ರಹ ಮಾಡಿಟ್ಟ ಜಾಗದಲ್ಲಿ ಅಗ್ನಿ ಕಾಣಿಸಿಕೊಂಡಿದೆ. ನಂತರ ಸಮೀಪದ ಟ್ಯಾಂಕ್‌ ಸ್ಫೋಟಗೊಂಡಿದೆ. ಸಮೀಪದಲ್ಲಿ ಇರುವ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.

ಕೆಟ್ಟ ವಾಸನೆಯಿಂದಾಗಿ ಜನರು ಉಸಿರಾಡಲು ಕಷ್ಟಪಟ್ಟಿದ್ದು, ಕೆಲವರ ಆರೋಗ್ಯ ಹದಗೆಟ್ಟಿದೆ. ಮುಂದಿನ ನಾಲ್ಕು, ಐದು ದಿನದಲ್ಲಿ ಘಟಕ ಮತ್ತೆ ಕಾರ್ಯಾರಂಭ ಮಾಡಲಿದೆ ಎಂದು ಕಂಪನಿ ತಿಳಿಸಿದೆ.

ರಾಜಧಾನಿ ಜಕಾರ್ತಾದಿಂದ 200 ಕಿ.ಮೀ ದೂರದಲ್ಲಿರುವ ಈ ಘಟಕ 90ರ ದಶಕದ ಮಧ್ಯಭಾಗದಲ್ಲಿ ಆರಂಭಗೊಂಡಿದ್ದು, ಪ್ರತಿ ನಿತ್ಯ 1.25 ಲಕ್ಷ ಬ್ಯಾರೆಲ್‌ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.

ಈ ಭಾರಿ ಅನಾಹುತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.. (ಕೃಪೆ ಎಎಫ್‌ಪಿ ನ್ಯೂಸ್‌ ಏಜೆನ್ಸಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net