ಡಿ.​ 31ರ ಒಳಗೆ ಆದಾಯ ತೆರಿಗೆ ಫೈಲ್​ ಮಾಡಿಲ್ಲ ಅಂದರೆ ಬೀಳಬಹುದು 10 ಸಾವಿರ ದಂಡ!

ITR
Published on

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡುವುದನ್ನು ಜುಲೈ 31ರಿಂದ ಡಿಸೆಂಬರ್​ 31ರವರೆಗೆ ಮುಂದೂಡಲಾಗಿತ್ತು. ಇದರ ಹೊರತಾಗಿಯೂ ಹಲವರು ಇನ್ನೂ ಆದಾಯ ತೆರಿಗೆ (ಐಟಿಆರ್​) ಸಲ್ಲಿಕೆ ಮಾಡಿಲ್ಲ. ಅಂಥವರಿಗೆ ಇರುವುದು ಇನ್ನೆರಡೇ ದಿನದ ಗಡುವು. ಇಲ್ಲದಿದ್ದರೆ ಬೀಳಬಹುದು 10 ಸಾವಿರ ರೂಪಾಯಿ ದಂಡ!

ಇಷ್ಟು ವರ್ಷ ಐದು ಸಾವಿರ ರೂಪಾಯಿವರೆಗೆ ಇದ್ದ ದಂಡದ ಮೊತ್ತವನ್ನು ಈ ವರ್ಷ 10 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಾಗಿದ್ದರೆ ಇಷ್ಟು ದುಬಾರಿ ದಂಡ ಯಾರ್ಯಾರಿಗೆ ಬೀಳಬಹುದು ಎನ್ನುವ ಡಿಟೇಲ್ಸ್​ ಇಲ್ಲಿದೆ ನೋಡಿ.

ವಿವಿಧ ಸೇವಿಂಗ್ಸ್​ಗಳ ನಂತರ ನಿಮ್ಮ ಪ್ರಸಕ್ತ ಹಣಕಾಸು ವರ್ಷದ ನಿವ್ವಳ ಆದಾಯ ಐದು ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಇದ್ದಲ್ಲಿ ನೀವು ಐಟಿ ರಿಟರ್ನ್​ ಸಲ್ಲಿಕೆ ಮಾಡಬೇಕು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಒಂದು ವೇಳೆ ಐದು ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಆದಾಯ ಹೊಂದಿದ್ದು ಡಿ.31ರ ಒಳಗೆ ಅದನ್ನು ಪಾವತಿ ಮಾಡದೇ ಹೋದರೆ ಅಂಥವರಿಗೆ 10 ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ.

ಒಂದು ವೇಳೆ ಐದು ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಇದ್ದು, ನೀವು ಐಟಿಆರ್​ ಫೈಲ್​ ಮಾಡದೇ ಹೋದರೆ ದಂಡದ ಮೊತ್ತ 1 ಸಾವಿರ ರೂಪಾಯಿ ಆಗಲಿದೆ.

2021ರ ಮಾರ್ಚ್​ ಅಂತ್ಯದವರೆಗೆ ಇದನ್ನು ಫೈಲ್​ ಮಾಡಲು ಅವಕಾಶವಿದೆ. ಆದರೆ ಡಿಸೆಂಬರ್​ 31ರ ನಂತರ ಅಂದರೆ ಜನವರಿ 1 ರಿಂದ ಮಾರ್ಚ್​ 31ರ ಒಳಗೆ ಫೈಲ್​ ಮಾಡಿದರೆ ಈ ದಂಡವನ್ನು ಕಟ್ಟುವುದು ಅನಿವಾರ್ಯ. ಇಲ್ಲದಿದ್ದರೆ ನಿಮ್ಮ ಐಟಿಆರ್​ ಫೈಲಿಂಗ್​ ಅಕ್ಸೆಪ್ಟ್​ ಆಗುವುದಿಲ್ಲ.

ಯಾರ ಆದಾಯವು ವಿನಾಯಿತಿಯ ಮಿತಿಯನ್ನು ಮೀರಿ, ಸಂಪೂರ್ಣ ತೆರಿಗೆಯನ್ನು ಈಗಾಗಲೇ ಪಾವತಿ ಮಾಡಿದ್ದರೂ ಡಿಸೆಂಬರ್ 31ನೇ ತಾರೀಕಿನೊಳಗೆ ಐಟಿಆರ್ ಫೈಲ್ ಮಾಡದಿದ್ದರೂ ದಂಡ ಪಾವತಿಸಬೇಕಾಗುತ್ತದೆ.

ಅಷ್ಟೇ ಅಲ್ಲದೇ ಆದಾಯ ತೆರಿಗೆ ವೆಬ್​ಸೈಟ್​ ಪ್ರಕಾರ, ಒಂದು ವೇಳೆ ಆದಾಯದ ಮಿತಿ 25 ಲಕ್ಷ ರೂಪಾಯಿಯನ್ನು ದಾಟಿದ್ದರೂ ಐಟಿಆರ್​ ಫೈಲ್​ ಮಾಡದಿದ್ದರೆ ಅಂಥವರಿಗೆ 6 ತಿಂಗಳಿನಿಂದ 7 ವರ್ಷದವರೆಗೆ ಜೈಲು ಕೂಡ ವಿಧಿಸುವ ಅವಕಾಶವಿದೆ. ಆದಾಯ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವವರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2018-19ರಿಂದ ಇಂಥದ್ದೊಂದು ದಂಡದ ಕುರಿತು ಯೋಜನೆ ಜಾರಿಗೆ ತರಲಾಗಿದೆ.

ಹೆಚ್ಚಿನ ಮಾಹಿತಿಗೆ ಆದಾಯ ತೆರಿಗೆ ಇಲಾಖೆ ವೆಬ್​ಸೈಟ್​ https://www.incometaxindiaefiling.gov.in/home ಕ್ಲಿಕ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net