ಪ್ರತ್ಯೇಕ ಪ್ರವೇಶ ಪರೀಕ್ಷೆ: ಅಧಿಸೂಚನೆ ರದ್ದು ಮಾಡಿದ ಸುಪ್ರೀಂಕೋರ್ಟ್​

exam
Published on

ನವದೆಹಲಿ: ಐದು ವರ್ಷಗಳ ಸಂಯೋಜಿತ ಬಿಎ-ಎಲ್‌ಎಲ್‌ಬಿ ಪದವಿ ಪ್ರವೇಶಕ್ಕಾಗಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ನಡೆಸಿದ ನ್ಯಾಷನಲ್‌ ಲಾ ಆಪ್ಟಿಟ್ಯೂಡ್ ಟೆಸ್ಟ್‌ -2020ರ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಸುಪ್ರೀಂಕೋರ್ಟ್‌ ಇಂದು ರದ್ದುಪಡಿಸಿದೆ.ಇದೇ 12ರಂದು ಈ ಅಧಿಸೂಚನೆ ಹೊರಡಿಸಲಾಗಿತ್ತು.

ಇದೇ 28ರಂದು ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಸೇರಿದಂತೆ ದೇಶದಾದ್ಯಂತವಿರುವ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್‌ಎಲ್‌ಯು) ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ -2020) ಪ್ರಕಾರವೇ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಕೋರ್ಟ್​ ನಿರ್ದೇಶನ ನೀಡಿದೆ.

ಎನ್ಎಲ್ಎಟಿ ನಿರ್ಧಾರ ಪ್ರಶ್ನಿಸಿ ಎನ್ಎಲ್ಎಸ್ಐಯುನ ಮಾಜಿ ಉಪಕುಲಪತಿ ಪ್ರೊ.ಆರ್.ವೆಂಕಟರಾವ್ ಮತ್ತು ಪ್ರವೇಶ ಪರೀಕ್ಷೆ ಆಕಾಂಕ್ಷಿಗಳ ಪಾಲಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಅಧಿಸೂಚನೆಯನ್ನು ರದ್ದು ಮಾಡಿದೆ.

ಎನ್‌ಎಲ್‌ಎಟಿ-2020 ಅಧಿಸೂಚನೆ ರದ್ದುಗೊಳಿಸಬೇಕೆಂದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು 17ರಂದು ನಡೆಸಿದ್ದ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಅದನ್ನು ಪ್ರಕಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net