

ಲಡಾಖ್: ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಭಾರತೀಯ ಸೇನೆ ಒಂಟೆಗಳನ್ನು ಬಳಸಿಕೊಳ್ಳಲು ಮುಂದಾಗಿದೆ.
ಅವಳಿ ಡುಬ್ಬಗಳುಳ್ಳ ಈ ಒಂಟೆಗಳು ಸೇನಾ ಕಾರ್ಯಾಚರಣೆಯಲ್ಲಿ ಬಹಳ ಸಹಕಾರಿಯಾಗಲಿದ್ದು, ಯುದ್ಧ ಸಾಮಗ್ರಿ ಒಯ್ಯಲು, ಗಸ್ತು ತಿರುಗಲು ಇದರ ಬಳಕೆಯಾಗಲಿದೆ. ಲಡಾಖ್‌ನ ಪೂರ್ವ ಭಾಗದ ದೌಲತ್‌ಬಾಗ್ ಓಲ್ಡಿ ಮತ್ತು ಡೆಪ್ಸಾಂಗ್‌ನಲ್ಲಿ ಇವು ನಿಯೋಜನೆಗೊಳ್ಳಲಿವೆ.
ಅವಳಿ ಡುಬ್ಬಗಳ ಈ ಒಂಟೆಯನ್ನು ಬ್ಯಾಕ್ಟ್ರಿಯನ್ ಒಂಟೆ ಎಂದೂ ಕರೆಯುತ್ತಾರೆ. ಮತ್ತು ಈ ಒಂಟೆಗಳು ಲಢಾಕ್ ನಲ್ಲಿ 12 ಸಾವಿರ ಅಡಿಗಳಿಗಿಂತಲೂ ಎತ್ತರದಲ್ಲಿರುವ ನುಬ್ರಾ ಕಣಿವೆ ಭಾಗಗಳಲ್ಲಿ ಕಾಣಸಿಗುತ್ತವೆ.
ಈ ಒಂಟೆಗಳು ಅಪಾರ ಶಕ್ತಿಯುತವಾಗಿವೆ. ಇವು ಎಂಥ ದುರ್ಗಮ ಬೆಟ್ಟಗಳನ್ನೂ ಸುಲಭದಲ್ಲಿ ಹತ್ತಿ ಇಳಿಯಬಲ್ಲವು. ಮಾತ್ರವಲ್ಲದೇ ಈ ಬೆಟ್ಟಗುಡ್ಡಗಳ ಮೇಲೆ, ಎತ್ತರದ ಶಿಖರಗಳಲ್ಲಿ ಇವು ಏಕಕಾಲಕ್ಕೆ 170 ಕೆ.ಜಿ. ತೂಕದ ಸಾಮಗ್ರಿಗಳನ್ನೂ ಒಯ್ಯುವಷ್ಟು ಶಕ್ಯವಾಗಿವೆ.
ಲಡಾಖ್‌ನ ಅವಳಿ ಡುಬ್ಬದ ಒಂಟೆಗಳು ಎಷ್ಟು ಸಮರ್ಥವಾಗಿವೆ ಎಂಬ ಬಗ್ಗೆ ಇದಾಗಲೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪರೀಕ್ಷೆಯಲ್ಲಿ ಸಾಬೀತುಕೂಡ ಆಗಿದೆ. ಇವುಗಳ ಸಾಮರ್ಥ್ಯ ಹಾಗೂ ಕೌಶಲದ ಕುರಿತು ಲೇಹ್ ನಲ್ಲಿರುವ ಹೈ ಆಟ್ಯಿಟ್ಯೂಡ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಸಂಶೋಧನೆಯನ್ನು ನಡೆಸಲಾಗಿದೆ.
ಈ ಭಾಗದಲ್ಲಿ ಚೀನಾ ಮತ್ತು ಭಾರತಗಳ ನಡುವೆ ಸಂಘರ್ಷ ನಡೆದಿರುವ ಈ ಸಂದರ್ಭದಲ್ಲಿ 17 ಸಾವಿರ ಅಡಿಗಳಿಗಿಂತಲೂ ಎತ್ತರದಲ್ಲಿರುವ ದೌಲತ್ ಬೇಗ್ ಓಲ್ಡೀ ಅಥವಾ ಡಿಬಿಒ ಮತ್ತು ಡೆಪ್ಸಾಂಗ್ ಪ್ರದೇಶಗಳಲ್ಲಿ ಈ ಒಂಟೆಗಳನ್ನು ಬಳಸಿಕೊಳ್ಳಲಿದೆ ಎಂದು ಸೇನಾ ಮೂಲಗಳು ಹೇಳಿವೆ.