ನಿತೀಶ್​ ಕುಮಾರ್​ 8.0: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ, ಡಿಸಿಎಂ ಹುದ್ದೆಗೇರಿದ ಲಾಲೂ ಪುತ್ರ!

oath
Published on

ಪಟ್ನಾ: ಬಿಹಾರದ ರಾಜಕೀಯದ ಆಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಎನ್‌ಡಿಎ ಜತೆಗಿನ ಮೈತ್ರಿಯನ್ನು ತೊರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್​ಕುಮಾರ್​ ಅವರೀಗ ಪುನಃ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರ ಜತೆಗೆ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್‌ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಈ ಮೂಲಕ 71 ವರ್ಷದ ನಿತೀಶ್​ ಕುಮಾರ್​, ಎಂಟನೇ ಬಾರಿಗೆ ಸಿಎಂ ಖುರ್ಚಿಯನ್ನು ಅಲಂಕರಿಸಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯು ಆಗಸ್ಟ್​ 15ರ ನಂತರ ಮಾಡುವ ನಿರೀಕ್ಷೆ ಇದೆ.

2017ರಲ್ಲಿ ಮಹಾಘಟಬಂಧನ ತೊರೆದಿದ್ದ ನಿತೀಶ್ ಕುಮಾರ್ ಎನ್ ಡಿಎ ಜೊತೆ ಮರು ಮೈತ್ರಿ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ 2013ರಲ್ಲಿ ಕೂಡ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾಗ ಅಸಮಾಧಾನಗೊಂಡು ನಿತೀಶ್ ಕುಮಾರ್ ಮೈತ್ರಿಯಿಂದ ಹೊರಬಂದಿದ್ದರು. ನಂತರ 2017ರಲ್ಲಿ ಮರು ಮೈತ್ರಿ ಮಾಡಿಕೊಂಡಿದ್ದರು. ಇದೀಗ ಎರಡನೇ ಬಾರಿ 9 ವರ್ಷಗಳ ನಂತರ ಮತ್ತೆ ಮೈತ್ರಿ ಮುರಿದುಕೊಂಡಿದ್ದಾರೆ.

ನಿತೀಶ್​ ಕುಮಾರ್​ ರಾಜಕೀಯ ಹಿನ್ನೆಲೆ:

ಇಂದು ಮುಖ್ಯಮಂತ್ರಿಯಾಗಿ ನಿತೀಶ್​ ಕುಮಾರ್​ ಪ್ರಮಾಣ ವಚನ ಸ್ವೀಕರಿಸಿದ್ದು 8ನೇ ಬಾರಿಗೆ ಈ ಸ್ಥಾನ ಅಲಂಕರಿಸುವುದರೊಂದಿಗೆ ದಾಖಲೆ ಬರೆದಿದ್ದಾರೆ. 2000ನೇ ಸಾಲಿನಲ್ಲಿ ಎನ್‌ಡಿಎ ನೇತೃತ್ವದಲ್ಲಿ ನಿತೀಶ್​ ಕುಮಾರ್​ ಪ್ರಥಮವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಈ ಸರ್ಕಾರ ಇದ್ದುದು ಒಂದು ವಾರ ಮಾತ್ರ!

2005ರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸಿದ ನಂತರ ನಿತೀಶ್​ಕುಮಾರ್​ ಮತ್ತೆ ಮುಖ್ಯಮಂತ್ರಿಯಾದರು. 2010ರಲ್ಲಿಯೂ ಎನ್‌ಡಿಎ ಭರ್ಜರಿ ಜಯಸಾಧಿಸಿ ಪುನಃ ನಿತೀಶ್​ ಕುಮಾರ್​ 3ನೇ ಬಾರಿ ಸಿಎಂ ಆದರು.

2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪರಾಭವಗೊಂಡಿತು. ಈ ಸೋಲಿನ ಹೊಣೆಯನ್ನು ಹೊತ್ತುಕೊಂಡ ನಿತೀಶ್​ಕುಮಾರ್​ ರಾಜೀನಾಮೆ ನೀಡಿದರು. ಆದರೆ 2015ರಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಬೆಂಬಲದ ಮಹಾಘಟಬಂಧನದಲ್ಲಿ 4ನೇ ಬಾರಿ ಮುಖ್ಯಮಂತ್ರಿ ಹುದ್ದೆ ಏರಿದರು.

2017ರಲ್ಲಿ ಮಹಾಘಟಬಂಧನ ಸರ್ಕಾರಕ್ಕೆ ರಾಜೀನಾಮೆ ನೀಡಿ ಮರುದಿನವೇ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆದರು. 2020ರ ನವೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಪುನಃ ಈ ಹುದ್ದೆ ಏರಿದರು. ಆದರೆ ಈಗ ಮತ್ತೆ ಮುನಿಸುಕೊಂಡು ರಾಜೀನಾಮೆ ನೀಡಿದ್ದಾರೆ. 8ನೇ ಬಾರಿಗೆ ಸಿಎಂ ಆಗಲು ಸನ್ನದ್ಧರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net