

ಮುಂಬೈ: ಒಂದಿಲ್ಲೊಂದು ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ನಟಿಯೆಂದರೆ ಕಂಗನಾ ರಣಾವತ್. ಸದ್ಯ 1975ರ ತುರ್ತು ಪರಿಸ್ಥಿತಿಯ ಕುರಿತು ನಡೆಯುತ್ತಿರುವ 'ಎಮರ್ಜೆನ್ಸಿ' ಚಿತ್ರದ ಶೂಟಿಂಗ್ನಲ್ಲಿ ನಟಿ ಬಿಜಿ. ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರವನ್ನು ನಿರ್ವಹಿಸುತ್ತಿರುವ ಕಂಗನಾ ಅವರಿಗೆ ತೀವ್ರ ಸ್ವರೂಪದಲ್ಲಿ ಡೆಂಘೆ ಕಾಡುತ್ತಿದೆ.
ಇಷ್ಟಾದರೂ ಕೂಡ ನಟಿ 'ಎಮರ್ಜೆನ್ಸಿ' ಚಿತ್ರೀಕರಣವನ್ನು ನಿಲ್ಲಿಸಲಿಲ್ಲ. ಈ ಚಿತ್ರದಲ್ಲಿ ಈಕೆ ನಾಯಕಿ ಮಾತ್ರವಲ್ಲ, ಚಿತ್ರದ ನಿರ್ದೇಶಕಿ ಕೂಡ ಇವರೇ. ಕಂಗನಾ ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಿದ್ದು, ನಟಿ ತೀವ್ರ ಜ್ವರದಿಂದ ಬಳಲುತ್ತಿದ್ದರೂ ಅವರ ಉತ್ಸಾಹ ಕಡಿಮೆಯಾಗಲಿಲ್ಲ.
ಕಳೆದ ಸೋಮವಾರ ಕಂಗನಾ ಅವರಿಗೆ ಡೆಂಘೆ ಇರುವುದು ದೃಢಪಟ್ಟಿತ್ತು. ಈ ಆನಾರೋಗ್ಯ ಕಾಣಿಸಿಕೊಂಡಿರುವುದು ದೇಹಕ್ಕೆ ಮಾತ್ರ, ಆತ್ಮಕ್ಕಲ್ಲ. ಡೆಂಘೆ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದಿರುವ ಕಂಗನಾ, ಎಂದಿನ ಲವಲವಿಕೆಯಿಂದ ಶೂಟಿಂಗ್ ಮುಂದುವರೆಸಿದ್ದಾರೆ.
ಕಂಗನಾ ಅನಾರೋಗ್ಯದ ಹೊರತಾಗಿಯೂ ಕೆಲಸ ಮಾಡುತ್ತಿದ್ದಾರೆ ಎಂದು ಅವರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಇನ್‌ಸ್ಟಾಗ್ರಾಮ್ ಪೋಸ್ಟ್ ಬಹಿರಂಗಪಡಿಸಿದೆ. ನೀವು ಡೆಂಘೆಯಿಂದ ಹಾಗೂ ಕಡಿಮೆ ಬಿಳಿ ರಕ್ತ ಕಣಗಳ ಸಂಖ್ಯೆ ಅಧಿಕ ಜ್ವರದಿಂದ ಬಳಲುತ್ತಿರುವಾಗಲೂ ಕೆಲಸ ಮಾಡುತ್ತೀರಿ. ಇದು ಉತ್ಸಾಹವಲ್ಲ, ಇದು ಹುಚ್ಚುತನವಲ್ಲ. ನಮ್ಮ ಲೀಡರ್ ಕಂಗನಾ ಅಂತಹ ಸ್ಫೂರ್ತಿ ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆಯಲಾಗಿದೆ.
'ಎಮರ್ಜೆನ್ಸಿ' ಚಿತ್ರವನ್ನು ರಿತೇಶ್ ಷಾ ಬರೆದಿದ್ದಾರೆ. ಅವರು ತಮ್ಮ ಹಿಂದಿನ ಚಿತ್ರ ಧಾಕಡ್ ಅನ್ನು ಸಹ ಬರೆದಿದ್ದಾರೆ. (ಏಜೆನ್ಸೀಸ್)