8ನೇ ಬಾರಿ ಸಿಎಂ ಖುರ್ಚಿಯಲ್ಲಿ ನಿತೀಶ್​: ಇವರ ರಾಜಕೀಯ ಇತಿಹಾಸವೇ ರೋಚಕ- ಇಂದು ಪ್ರಮಾಣ ವಚನ

nitish
Published on

ಪಟ್ನಾ: ಎನ್‌ಡಿಎ ಜತೆಗಿನ ಮೈತ್ರಿಯನ್ನು ತೊರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್​ಕುಮಾರ್​ ಅವರೇ ಪುನಃ ಮುಖ್ಯಮಂತ್ರಿಯಾಗಿ ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ 71 ವರ್ಷದ ನಿತೀಶ್​ ಕುಮಾರ್​, ಎಂಟನೇ ಬಾರಿಗೆ ಸಿಎಂ ಹುದ್ದೆ ಏರುವ ಮೂಲಕ ದಾಖಲೆ ಬರೆಯದಿದ್ದಾರೆ.

ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್‌ ಸೇರಿ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಯಾಗುತ್ತಿದೆ. ಇವರಿಬ್ಬರ ಜತೆಗೆ 3 - 5 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಾಹ್ನ 2 ಗಂಟೆಗೆ ಪಟ್ನಾದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಫಾಗು ಚೌಹಾಣ್‌ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಪಿಐಎಂಎಲ್‌ (ಎಲ್‌), ಸಿಪಿಐ ಹಾಗೂ ಸಿಪಿಐ(ಎಂ) ಮಹಾಘಟಬಂಧನ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಹೇಳಿವೆ.

ನಿತೀಶ್​ ಕುಮಾರ್​ ರಾಜಕೀಯ ಹಿನ್ನೆಲೆ:

ಇಂದು ಮುಖ್ಯಮಂತ್ರಿಯಾಗಿ ನಿತೀಶ್​ ಕುಮಾರ್​ ಪ್ರಮಾಣ ವಚನ ಸ್ವೀಕರಿಸಿದರೆ ಅವರು 8ನೇ ಬಾರಿಗೆ ಈ ಸ್ಥಾನ ಅಲಂಕರಿಸುವುದರೊಂದಿಗೆ ದಾಖಲೆ ಬರೆಯಲಿದ್ದಾರೆ. 2000ನೇ ಸಾಲಿನಲ್ಲಿ ಎನ್‌ಡಿಎ ನೇತೃತ್ವದಲ್ಲಿ ನಿತೀಶ್​ ಕುಮಾರ್​ ಪ್ರಥಮವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಈ ಸರ್ಕಾರ ಇದ್ದುದು ಒಂದು ವಾರ ಮಾತ್ರ!

2005ರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸಿದ ನಂತರ ನಿತೀಶ್​ಕುಮಾರ್​ ಮತ್ತೆ ಮುಖ್ಯಮಂತ್ರಿಯಾದರು. 2010ರಲ್ಲಿಯೂ ಎನ್‌ಡಿಎ ಭರ್ಜರಿ ಜಯಸಾಧಿಸಿ ಪುನಃ ನಿತೀಶ್​ ಕುಮಾರ್​ 3ನೇ ಬಾರಿ ಸಿಎಂ ಆದರು.

2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪರಾಭವಗೊಂಡಿತು. ಈ ಸೋಲಿನ ಹೊಣೆಯನ್ನು ಹೊತ್ತುಕೊಂಡ ನಿತೀಶ್​ಕುಮಾರ್​ ರಾಜೀನಾಮೆ ನೀಡಿದರು. ಆದರೆ 2015ರಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಬೆಂಬಲದ ಮಹಾಘಟಬಂಧನದಲ್ಲಿ 4ನೇ ಬಾರಿ ಮುಖ್ಯಮಂತ್ರಿ ಹುದ್ದೆ ಏರಿದರು.

2017ರಲ್ಲಿ ಮಹಾಘಟಬಂಧನ ಸರ್ಕಾರಕ್ಕೆ ರಾಜೀನಾಮೆ ನೀಡಿ ಮರುದಿನವೇ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆದರು. 2020ರ ನವೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಪುನಃ ಈ ಹುದ್ದೆ ಏರಿದರು. ಆದರೆ ಈಗ ಮತ್ತೆ ಮುನಿಸುಕೊಂಡು ರಾಜೀನಾಮೆ ನೀಡಿದ್ದಾರೆ. 8ನೇ ಬಾರಿಗೆ ಸಿಎಂ ಆಗಲು ಸನ್ನದ್ಧರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net