

ನವದೆಹಲಿ: ನೀತಿ ಆಯೋಗವು ಮೊಟ್ಟ ಮೊದಲ ಬಾರಿಗೆ ಎಸ್‌ಡಿಜಿ (ಸಸ್ಟೇನೇಬಲ್ ಡೆವಲಪ್‌ಮೆಂಟ್ ಗೋಲ್ಸ್) ಸೂಚ್ಯಂಕ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಉದ್ಯೋಗ ಮತ್ತು ಅರ್ಥಿಕ ಪ್ರಗತಿಯ ದೃಷ್ಟಿಯಿಂದ ಬೆಂಗಳೂರು ದೇಶದಲ್ಲೇ ಅತ್ಯುತ್ತಮ ನಗರವಾಗಿದೆ ಎಂದು ಹೇಳಿದೆ.
ಆದರೆ ಇದೇ ವೇಳೆಗೆ ಕರ್ನಾಟಕಕ್ಕೆ ಸ್ವಲ್ಪ ಶಾಕ್ ಆಗುವಂಥ ವರದಿ ಕೂಡ ಇದರಲ್ಲಿದೆ. ಅದೇನೆಂದರೆ, ಬಡತನದ ಪಟ್ಟಿಯಲ್ಲಿ ಕರ್ನಾಟಕಕ್ಕೆ 19ನೇ ಸ್ಥಾನವಿದೆ. ಕರ್ನಾಟಕದಲ್ಲಿ ಒಟ್ಟಾರೆ ಶೇ. 13.16ರಷ್ಟು ಜನಸಂಖ್ಯೆ ಬಡತನದಲ್ಲಿರುವುದಾಗಿ ವರದಿ ಹೇಳಿದೆ.
ಈ ಕುರಿತು ಸ್ಪಷ್ಟನೆಯನ್ನೂ ಕೊಟ್ಟಿರುವ ಆಯೋಗವು, ಕೇವಲ ಹಣಗಳಿಕೆ, ಆಸ್ತಿಪಾಸ್ತಿಗಳನ್ನು ಮಾತ್ರವೇ ಬಡತನ ಎಂದು ಪರಿಗಣಿಸಲಾಗಿಲ್ಲ. ಬಹು ಆಯಾಮದ ಆಧಾರದಲ್ಲಿ ಜನರ ಜೀವನಶೈಲಿಯ ಅಧ್ಯಯನ ನಡೆಸಿ ಮಾಹಿತಿ ಕಲೆಹಾಕಿ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.
ಈ ವರದಿಯ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ಪ್ರಮಾಣದ ಬಡವರು ಬಿಹಾರದಲ್ಲಿ ಇದ್ದಾರೆ. ರಾಜ್ಯದ ಶೇ. 51.91ರಷ್ಟು ಜನಸಂಖ್ಯೆಯು ಬಡತನ ರೇಖೆಗಿಂತ ಕೆಳಗಿದ್ದು, ವಾರ್ಷಿಕ ಆದಾಯವು ಬಹಳ ಕಡಿಮೆಯಿದೆ. ಜಾರ್ಖಂಡ್ 2ನೇ ಸ್ಥಾನದಲ್ಲಿದ್ದು, , ಶೇ. 42.16 ರಷ್ಟು ಜನರು ಬಡತನ ರೇಖೆ ಕೆಳಗಿದ್ದಾರೆ. ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶವಿದೆ. ಇಲ್ಲಿ ಶೇ. 37.79ರಷ್ಟು ಜನರು ಬಡವರಿದ್ದಾರೆ. ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ, ಮೇಘಾಲಯ, ಅಸ್ಸಾಂ, ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಒಡಿಶಾ ಇದೆ.
ಕೇರಳ ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ. ಅಲ್ಲಿ ಶೇ. 0.71 ಜನ ಬಡವರಾಗಿದ್ದಾರೆ. ಗೋವಾದಲ್ಲಿ ಶೇ. 3.76 ಮಂದಿ, ಸಿಕ್ಕಿಂ (ಶೇ. 3.82), ತಮಿಳುನಾಡು (ಶೇ. 4.89) ಮತ್ತು ಪಂಜಾಬ್ (ಶೇ. 5.59) ಮಂದಿ ಬಡವರಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಾದ್ರಾ ಮತ್ತು ನಗರ ಹವೇಲಿ (ಶೇ. 27.36), ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ (12.58), ದಮನ್ ಮತ್ತು ದಿಯು (ಶೇ. 6.82) ಮತ್ತು ಚಂಡೀಗಢ (ಶೇ. 5.97) ಬಡ ಪ್ರದೇಶಗಳಾಗಿವೆ.
ಇನ್ನು ಅಪೌಷ್ಟಿಕತೆಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಾಗಿದೆ. ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದ ನಂತರ ಬಿಹಾರದಲ್ಲಿ ಅಪೌಷ್ಟಿಕರ ಸಂಖ್ಯೆ ಹೆಚ್ಚಿದೆ.