ಹೈದರಾಬಾದ್: ಮನೆಗಳನ್ನು ನಿರ್ಮಾಣ ಮಾಡುವಾಗ ಮರಗಳು ಅಡ್ಡಬರುವುದು ಸಹಜ. ಆದರೆ ಆ ಮರಗಳನ್ನು ಮನಸೋಇಚ್ಛೆ ಕಡಿಯುವಂತಿಲ್ಲ. ಅದಕ್ಕೆ ಅಧಿಕಾರಿಗಳ ಅನುಮತಿ ಬೇಕು, ಕೆಲವೊಂದು ಷರತ್ತುಗಳನ್ನು ವಿಧಿಸಿದ ಮೇಲೆ ಮರ ಕಡಿಯಲು ಅನುಮತಿ ನೀಡಲಾಗುತ್ತದೆ.
ಆದರೆ ಎಷ್ಟೋ ಕಡೆಗಳಲ್ಲಿ ಈ ನಿಯಮ ಮೀರಿ ಕಟ್ಟಡ ನಿರ್ಮಾಣದ ವೇಳೆ ಬೇಕಾಬಿಟ್ಟೆ ಮರ ಕಡಿಯಲಾಗುತ್ತದೆ. ಇದನ್ನು ನೋಡಿದವರು ಕೂಡ ನಮಗ್ಯಾಕೆ ಬೇಕು ಉಸಾಬರಿ ಎಂದು ಸುಮ್ಮನಾಗುತ್ತಾರೆ. ಆದರೆ ಇಲ್ಲೊಬ್ಬ 8ನೇ ಕ್ಲಾಸ್ ಬಾಲಕ ಸುಮ್ಮನಾಗದೇ ಅಧಿಕಾರಿಗಳಿಗೆ ಕರೆ ಮಾಡಿ, ಮರ ಕಡಿಯುವವನಿಗೆ ಭಾರಿ ದಂಡ ಹಾಕಿಸಿ ಇದೀಗ ಸುದ್ದಿಯಾಗಿದ್ದಾನೆ, ಮಾತ್ರವಲ್ಲದೇ ಮರ ಕಡಿಯುವವರಿಗೆ ಹಾಗೂ ಮರ ಕಡಿಯುವುದನ್ನು ನೋಡಿಯೂ ಸುಮ್ಮನೇ ಇರುವವರಿಗೆ ಈ ಬಾಲಕ ಬುದ್ಧಿ ಕಲಿಸಿದ್ದಾನೆ.
ಈ ಘಟನೆ ನಡೆದಿರುವುದು ಹೈದರಾಬಾದ್ನಲ್ಲಿ. ಹೊಸ ಮನೆ ನಿರ್ಮಾಣಕ್ಕೆ 40 ವರ್ಷಗಳಿಂದ ಬೆಳೆದು ನಿಂತಿರುವ ಬೇವಿನ ಮರ ಅಡ್ಡಿಯಾಗುತ್ತಿತ್ತು ಎಂದು ಬೇವಿನ ಮರ ಕತ್ತರಿಸಲಾಗುತ್ತಿತ್ತು. ಜಿ ಸಂತೋಷ್ ರೆಡ್ಡಿ ಎನ್ನುವವರು ಅರಣ್ಯ ಇಲಾಖೆಗೆ ಮಾಹಿತಿ ನೀಡದೇ ಈ ಕ್ರಮ ತೆಗೆದುಕೊಂಡಿದ್ದರು.
ಮರ ಕತ್ತರಿಸುವುದನ್ನು ಗಮನಿಸಿದ 8ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಸರ್ ಸರ್ ಇಲ್ಲೊಬ್ಬ ಅಂಕಲ್ ಮರ ಕಡಿಯುತ್ತಿದ್ದಾರೆ ಎಂದು ದೂರು ನೀಡಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೆಡ್ಡಿಯವರಿಗೆ 62 ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದಾರೆ.
ಮರ ಕಡಿಯುತ್ತಿರುವ ವಿಷಯವನ್ನು ಸಂಬಂಧ ಪಟ್ಟ ಇಲಾಖೆಗೆ ತಿಳಿಸಿದ ಬಾಲಕನ ಕೆಲಸಕ್ಕೆ ಅರಣ್ಯ ಇಲಾಖೆ ಹಾಗೂ ಸುತ್ತಮುತ್ತಲಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.