ನಭಕ್ಕೆ ನೆಗೆಯಲಿದೆ ಶೌಚಗೃಹ: ನಾಸಾದಿಂದ ನಾಳೆಯೇ ಮುಹೂರ್ತ ಫಿಕ್ಸ್​

toilet
Published on

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸುವ ನಿಟ್ಟಿನಲ್ಲಿ ಸುಧಾರಿತ ಶೌಚಗೃಹ ನಿರ್ಮಿಸಿದೆ.

ಭವಿಷ್ಯದ ಚಂದ್ರ ಮತ್ತು ಮಂಗಳ ಕಾರ್ಯಾಚರಣೆಗಳಲ್ಲಿ ಇದೇ ರೀತಿಯ ವ್ಯವಸ್ಥೆಯನ್ನು ಬಳಸುವ ಮೊದಲು ಪರೀಕ್ಷಿಸಲು ಇದರ ಉಡಾವಣೆಗೆ ನಾಸಾ ಮುಂದಾಗಿದೆ.

23 ಮಿಲಿಯನ್ ಡಾಲರ್ (ಸುಮಾರು 169.50 ಕೋಟಿ ರೂಪಾಯಿ) ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಉಡಾವಣಾ ವಾಹಕ ಮೂಲಕ ಬಾಹ್ಯಾಕಾಶಕ್ಕೆ ಇದನ್ನು ರವಾನಿಸಲಿದೆ. ಸೆ.29ರಂದು (ನಾಳೆ) ವರ್ಜೀನಿಯಾದಲ್ಲಿನ ನಾಸಾದ ವ್ಯಾಲಾಪ್ಸ್‌ ಫ್ಲೈಟ್‌ ಫೆಸಿಲಿಟಿ ಕೇಂದ್ರದಿಂದ ರಾಕೆಟ್‌ ಮೂಲಕ ಶೌಚಗೃಹ ನಭಕ್ಕೆ ಚಿಮ್ಮಲಿದೆ.

ಪ್ರಸ್ತುತ ಇಲ್ಲಿ ಬಳಕೆಯಾಗುತ್ತಿರುವ ಬಾತ್‌ರೂಂಗಿಂತ ಈ ಸುಧಾರಿತ ಮಾದರಿಯು, ಗಾತ್ರದಲ್ಲಿ ಶೇ.65ರಷ್ಟು ಚಿಕ್ಕದು ಮತ್ತು ಶೇ.40ರಷ್ಟು ಹಗುರವಿದೆ ಎಂದು ನಾಸಾ ಹೇಳಿದೆ. ಈ ಶೌಚಗೃಹವನ್ನು ಯುನಿವರ್ಸಲ್ ವೇಸ್ಟ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಯುಡಬ್ಲ್ಯೂಎಂಎಸ್) ಎಂದು ಕರೆಯಲಾಗುತ್ತಿದೆ.

ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಹೆಚ್ಚು ಆರಾಮದಾಯಕವಾಗಿದೆ. ಇದರಿಂದ ಗಗನಯಾತ್ರಿಗಳು ತಮ್ಮ ಜತೆ ಕೊಂಡೊಯ್ಯಲು ಭಾರಿ ಅನುಕೂಲಕರವಾಗಲಿದೆ ಎಂದು ನಾಸಾ ಹೇಳಿದೆ.

ಗುರುತ್ವಾಕರ್ಷಣೆಯ ಕೊರತೆಯಿಂದಾಗಿ ಗಗನಯಾತ್ರಿಗಳಿಗೆ ಸದ್ಯ ಮಲ-ಮೂತ್ರ ವಿಸರ್ಜನೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಇದೀಗ ಆ ಸಮಸ್ಯೆಗಳನ್ನು ತೊಲಗಿಸಲು ಈ ಪ್ರಯತ್ನ ಮಾಡಲಾಗಿದೆ. ಈ ಶೌಚಗೃಹದ ಮುಚ್ಚಳವನ್ನು ಎತ್ತಿದಾಗ ಗಾಳಿಯ ಹರಿವಿನ ಸ್ವಯಂಚಾಲಿತ ಪ್ರಕ್ರಿಯೆ ಶುರುವಾಗುವ ಹಿನ್ನೆಲೆಯಲ್ಲಿ ವಾಸನೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂದು ನಾಸಾ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net