ಪ್ರತಿಭಟನೆ ಹಿಂಸೆಗೆ ತಿರುಗಿಸುವ ಹುನ್ನಾರ: ಟ್ರ್ಯಾಕ್ಟರ್​ ಸುಟ್ಟು ಭಸ್ಮ ಮಾಡಿದ ಕಿಡಿಗೇಡಿಗಳು

tractor
Published on

ನವದೆಹಲಿ: ಯಾವುದೇ ಪ್ರತಿಭಟನೆಗಳು ನಡೆದಾಗ, ಅದರ ದುರ್ಲಾಭ ಪಡೆದು ಕೆಲವು ಕಿಡಿಗೇಡಿಗಳು ಹೀನಾಯಕೃತ್ಯಕ್ಕೆ ಇಳಿಯುವುದು ಇಂದಿನ ದಿನಗಳಲ್ಲಿ ಮಾಮೂಲಾಗಿದೆ.

ಅದೇ ರೀತಿ ನೂತನ ಕೃಷಿ ಕಾನೂನಿನ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆ ವೇಳೆ ದೆಹಲಿಯ ಪ್ರಸಿದ್ಧ ಇಂಡಿಯಾ ಗೇಟ್​ ಬಳಿ ಕಿಡಿಗೇಡಿಗಳು ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಸುಮಾರು 15-20 ಮಂದಿಯ ಗುಂಪು ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬೆಂಕಿಗಾಹುತಿಯಾಗಿರುವ ಟ್ರ್ಯಾಕ್ಟರ್​ ಅನ್ನು ತೆರವುಗೊಳಿಸಿರುವ ಪೊಲೀಸರು ಕಿಡಿಗೇಡಿಗಳನ್ನು ಗುರುತಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಪ್ರತಿಭಟನೆಯನ್ನು ಹಿಂಸೆಗೆ ತಿರುಗಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಮಸಿಬಳಿಯುವ ಯತ್ನ ಇದಾಗಿರುವುದಾಗಿ ಹಲವರು ಆರೋಪಿಸಿದ್ದಾರೆ.

ತಮ್ಮ ಜೀವನಾಧಾರವಾಗಿರುವ ಟ್ರ್ಯಾಕ್ಟರ್​ ಅನ್ನು ಯಾವುದೇ ಕಾರಣಕ್ಕೂ ಪ್ರತಿಭಟನಾನಿರತ ರೈತರು ಸುಡಲು ಸಾಧ್ಯವೇ ಇಲ್ಲ. ರೈತರ ಪರವಾಗಿರುವ ಕಾನೂನಿನ ವಿರುದ್ಧ ಇಲ್ಲಸಲ್ಲದ ಗುಲ್ಲು ಹಬ್ಬಿಸಿರುವ ಕೆಲವು ಕುತಂತ್ರ ಬುದ್ಧಿಯವರು ರೈತರ ತಲೆಯನ್ನು ತಿರುಗಿಸಿದ್ದಾರೆ. ಈ ಕಿಡಿಗೇಡಿಗಳೇ ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿರುವುದು ಎಂದು ಆರೋಪಗಳು ಕೇಳಿಬಂದಿವೆ.

ಈ ಮಧ್ಯೆಯೇ ಇಂಥ ಹಿಂಸಾಚಾರಕ್ಕೆ ಕೆಲವು ರಾಜಕೀಯ ಪಕ್ಷಗಳು ಕುಮ್ಮಕ್ಕು ನೀಡುತ್ತಿವೆ ಎಂದು ಗಂಭೀರ ಆರೋಪಗಳನ್ನೂ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net