

ಕೆ.ಆರ್.ನಗರ: ಸಹಕಾರ ರತ್ನ, ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸಂಸ್ಥಾಪಕ ಹಾಗೂ ಮಾಜಿ ಸಚಿವ ದಿ.ಎಸ್.ನಂಜಪ್ಪ ಅವರ 10ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಕೇಂದ್ರ ಕಚೇರಿ ಆವರಣದಲ್ಲಿರುವ ಎಸ್.ನಂಜಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹಲವು ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕುಟುಂಬಸ್ಥರು ಮತ್ತು ಬ್ಯಾಂಕ್ ವತಿಯಿಂದ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ತಾಲೂಕು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಬಳಿಕ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ದಿ.ಎಸ್.ನಂಜಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಚಾಲನೆ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಎಸ್.ನಂಜಪ್ಪ ಅವರದು ಅಪರೂಪದ ವ್ಯಕ್ತಿತ್ವವಾಗಿದ್ದು ನನ್ನ ಸಮಕಾಲೀನರಾಗಿ ರಾಜಕೀಯ ಮಾಡಿದರು. ನಮ್ಮಲ್ಲಿ ವಿಶ್ವಾಸಯುತ ರಾಜಕಾರಣವಿತ್ತು. ಅವರು ಮೂರು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಕೆಲಸ ಮಾಡುವ ಮೂಲಕ ತಾಲೂಕಿಗೆ ಹಲವು ಶಾಸ್ವತವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಅಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ದೀರ್ಘಾವಧಿ ಅಧಿಕಾರ ಮಾಡಿ ಅದರ ಏಳಿಗೆಗೆ ಕಾರಣಕರ್ತರಾಗಿದ್ದರು. ಪಟ್ಟಣದಲ್ಲಿ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪಿಸಿ ಸಣ್ಣ ವ್ಯಾಪಾರಿಗಳು, ಮಧ್ಯಮವರ್ಗದ ಜನಸಾಮಾನ್ಯರಿಗೆ ಆರ್ಥಿಕವಾಗಿ ಸಾಲ ಸೌಲಭ್ಯ ದೊರಕಿಸಿಕೊಟ್ಟರು. ಇಂದು ಆ ಬ್ಯಾಂಕ್ ನಾಲ್ಕೈದು ಶಾಖೆಗಳನ್ನು ತೆರೆದು ಯಶಸ್ವಿಯಾಗಿ ನಡೆಯುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಛಾಪು ಮೂಡಿಸಿದೆ ಎಂದು ಹೇಳಿದರು.
ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಎಸ್.ನಂಜಪ್ಪ ಅವರ ಪತ್ನಿ ಲಲಿತಮ್ಮ, ತಂಬಾಕು ಮಂಡಳಿ ನಿವೃತ್ತ ಅಧಿಕಾರಿ ಕೆ.ಎನ್.ದಿನೇಶ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಅನುಶ್ರುತ್ ದಿನೇಶ್, ಮೈಸೂರು ಮಹಾ ನಗರ ಪಾಲಿಕೆ ಸದಸ್ಯ ಪಿ.ಪ್ರಶಾಂತ್‌ಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ನವನಗರ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಕೇಶವ್, ವೈ.ಎಸ್.ಕುಮಾರ್, ಎಂ.ಕೆ.ಮಹದೇವ್, ಚಂದ್ರಕುಮಾರ್, ಪ್ರಧಾನ ವ್ಯವಸ್ಥಾಪಕ ಸಿ.ಸುರೇಶ್, ವ್ಯವಸ್ಥಾಪಕ ಎಂ.ಪಿ.ಸುಹಾಸ್, ಮಾಜಿ ನಿರ್ದೇಶಕ ಎಚ್.ಎಸ್.ವೇಣುಗೋಪಾಲ್, ಪುರಸಭಾ ಸದಸ್ಯರಾದ ಕೆ.ಎಲ್.ಜಗದೀಶ್, ನಟರಾಜ್ ಹಾಜರಿದ್ದರು.