

ಧಾರವಾಡ: ವಿದ್ಯಾಕಾಶಿ ಖ್ಯಾತಿಯ ಧಾರವಾಡದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಉದ್ಘಾಟನೆ ಮಾಡಿದರು.
ಧಾರವಾಡ ಸಮೀಪ ಸತ್ತೂರಿನ ಉದಯಗಿರಿ ಬಳಿಯ ಕ್ಯಾಂಪಸ್ನಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. 2015ರಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಆಧಾರದ ಮೇಲೆ ಸ್ಥಾಪನೆಯಾಗಿರುವ, ಒಟ್ಟು 128 ಕೋಟಿ ರೂ. ವೆಚ್ಚದ ನೂತನ ಕ್ಯಾಂಪಸ್ ಅನ್ನು ಮುರ್ಮು ಉದ್ಘಾಟಿಸಿದರು. 61 ಎಕರೆ ಭೂಮಿಯಲ್ಲಿ ಈ ಕ್ಯಾಂಪಸ್ ಸ್ಥಾಪನೆ ಮಾಡಲಾಗಿದೆ.
ಐಐಐಟಿಯಲ್ಲಿ ಒಟ್ಟು 1200 ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಐಐಐಟಿ ಧಾರವಾಡದ ಆಡಳಿತ ಮಂಡಳಿಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾ ಮೂರ್ತಿ ಕಾರ್ಯಾಧ್ಯಕ್ಷರಾಗಿದ್ದಾರೆ. ಇಲ್ಲಿ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಡಾಟಾ ಸೈನ್ಸ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಕೋರ್ಸುಗಳು ಇವೆ.
ಕ್ರಮವಾಗಿ 150, 75 ಹಾಗೂ 75 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು. ಪಿಎಚ್ಡಿ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸುಸಜ್ಜಿತ ಗ್ರಂಥಾಲಯವಿದ್ದು ದಿನದ 24 ಗಂಟೆ ಮುಕ್ತವಾಗಲಿದೆ.
ಇನ್ಫೋಸಿಸ್ ಫೌಂಡೇಶನ್ ಈ ಕಟ್ಟಡ ನಿರ್ಮಾಣಕ್ಕೆ 28.28 ಕೋಟಿ ರೂಪಾಯಿ ನೀಡಿದ್ದು, ಈ ಹಣದಲ್ಲಿ ವಿದ್ಯಾರ್ಥಿನಿಯರ ಹಾಸ್ಟೇಲ್ ನಿರ್ಮಾಣ ಮಾಡಲಾಗಿದೆ. ಸಂಸ್ಥೆಯಲ್ಲಿ ಉನ್ನತ ಅರ್ಹತೆ ಹೊಂದಿರುವ 36 ಬೋಧಕರು ಹಾಗೂ 29 ಶಿಕ್ಷಕೇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇಂಥದ್ದೊಂದು ಕ್ಯಾಂಪಸ್ ಇಂದು ರಾಷ್ಟ್ರಪತಿಗಳಿಂದ ಅನಾವರಣಗೊಂಡಿತು. ಇದಕ್ಕೂ ಮೊದಲು ರಾಷ್ಟ್ರಪತಿ ಮುರ್ಮು ಅವರು ಧಾರವಾಡ ಮಹಾನಗರಪಾಲಿಕೆಯು ಇಲ್ಲಿನ ಕರ್ನಾಟಕ ಜಿಮ್‌ಖಾನಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಸನ್ಮಾನ ಸ್ವೀಕರಿಸಿದರು. 'ಹುಬ್ಬಳ್ಳಿ - ಧಾರವಾಡ ಜನರ ಪ್ರೀತಿಯು ನನ್ನನ್ನು ಪುಳಕಿತಗೊಳಿಸಿದೆ. ಇದು ಭಾರತದ ರಾಷ್ಟ್ರಪತಿಗೆ ಸಂದ ಸನ್ಮಾನ ಮಾತ್ರವಲ್ಲ, ಇದು ಇಡೀ ದೇಶದ ಮಹಿಳೆಯರಿಗೆ ಸಂದ ಸನ್ಮಾನವಾಗಿದೆ' ಎಂದರು. 'ಇಡೀ ಭಾರತದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಉಲ್ಲೇಖನೀಯವಾಗಿದೆ. ಪ್ರಾಚೀನತೆ ಮತ್ತು ಆಧುನಿಕತೆಯ ಸಂಗಮವಾಗಿರುವ ಹುಬ್ಬಳ್ಳಿ-ಧಾರವಾಡ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾದಾನ ಮಾಡುವ ಮೂಲಕ ವಿದ್ಯಾಕಾಶಿಯಾಗಿ ಹೊರಹೊಮ್ಮಿದೆ' ಎಂದು ಮುರ್ಮು ಹೇಳಿದರು. (ದಿಗ್ವಿಜಯ ನ್ಯೂಸ್)