

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ವಿಧ್ಯುಕ್ತ ಚಾಲನೆ ಸಿಕ್ಕಿದೆ.
ಇಂದು(ಸೋಮವಾರ) ಬೆಳಗ್ಗೆ 9.45ರಿಂದ 10.05ರ ವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಅಧಿದೇವತೆ ಚಾಮುಂಡಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟಿಸಲಾಯಿತು. ಇದಕ್ಕೂ ಮುನ್ನ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಗರ್ಭಗುಡಿಯಲ್ಲಿ ಕೆಲ ನಿಮಿಷ ಪ್ರಾರ್ಥನೆ ಸಲ್ಲಿಸಿದ ರಾಷ್ಟ್ರಪತಿ, ದೀಪ ಬೆಳಗಿಸಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ದಸರಾಗೆ ಚಾಲನೆ ನೀಡಿದರು.
ವೇದಿಕೆ ಮುಂಭಾಗ ಬಂದು ಎಲ್ಲರಿಗೂ ರಾಷ್ಟ್ರಪತಿಗಳು ಕೈ ಮುಗಿದು ನಮಸ್ಕರಿಸಿದರು. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಉಪಸ್ಥಿತರಿದ್ದರು.
ಇದೀಗ ದಸರಾ ಸಡಗರದ ಅಂಕದ ಪರದೆ ಗರಿ ಬಿಚ್ಚಿದ್ದು, ಸಾಲು ಸಾಲು ದಸರಾ ಚಟುವಟಿಕೆಗಳು ಅನಾವರಣಗೊಳ್ಳಲಿದೆ.