

ಮುಂಬೈ: ತನ್ನ ಗೆಳೆಯನ ಜತೆ ದೈಹಿಕ ಸಂಬಂಧ ಬೆಳೆಸಿ ನಂತರ ಅತ್ಯಾಚಾರದ ಕೇಸ್ ಹಾಕಿ ಗೆಳೆಯನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಯುವತಿಯೊಬ್ಬಳಿಗೆ ಮುಂಬೈ ಹೈಕೋರ್ಟ್ 25 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
ಮಹಾರಾಷ್ಟ್ರ ಪೊಲೀಸ್ ಕಲ್ಯಾಣನಿಧಿಗೆ ನಾಲ್ಕು ವಾರದೊಳಗೆ 25 ಸಾವಿರ ರೂಪಾಯಿಗಳ ದಂಡದ ಹಣವನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿಗಳಾದ ಆರ್.ಡಿ. ಧನುಕಾ ಮತ್ತು ವಿ.ಜಿ. ಬಿಶ್ತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೂಚಿಸಿದೆ.
ಪಾಲ್ಗರ್ ಜಿಲ್ಲೆಯ ನಾಲಾಸೊಪರಾ ಪೊಲೀಸ್ ಠಾಣೆಯಲ್ಲಿ ಮಾರ್ಚ್ 16ರಂದು ಮಹಿಳೆಯೊಬ್ಬರು ತನ್ನ ಗೆಳೆಯ ಮಾದಕವಸ್ತು ಸೇವಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಳು. ಇದರ ಅನ್ವಯ ಯುವಕನ ವಿರುದ್ಧ ಕೇಸ್ ದಾಖಲಾಗಿತ್ತು. ವಿಚಾರಣೆ ನಡೆಯುತ್ತಿತ್ತು.
ನಂತರ ಯುವತಿ ತಾನು ಸಲ್ಲಿಸಿದ್ದ ಎಫ್‌ಐಆರ್ ರದ್ದು ಮಾಡುವಂತೆ ಕೋರಿದ್ದಳು. ಆದರೆ ಒಮ್ಮೆ ಸಲ್ಲಿಸಿದ ಎಫ್ಐಆರ್ ರದ್ದು ಆಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಳು. ತಾನು ಗೆಳೆಯನ ಜತೆ ಸಂಬಂಧ ಹೊಂದಿದ್ದೆ. ಪಾಲಕರ ಒತ್ತಾಯಕ್ಕೆ ಮಣಿದು ಸುಳ್ಳಾಗಿ ಅತ್ಯಾಚಾರ ಕೇಸ್ ಹಾಕಿದ್ದೆ. ದಯವಿಟ್ಟು ಎಫ್‌ಐಆರ್ ರದ್ದು ಮಾಡಿ ಎಂದುಕೋರಿದ್ದಳು.
ಸುಖಾಸುಮ್ಮನೆ ಯುವಕನ ವಿರುದ್ಧ ಕೇಸ್ ಹಾಕಿ ಆತನನ್ನು ವಿನಾಕಾರಣ ಕೋರ್ಟ್ ಅಲೆಯುವಂತೆ ಮಾಡಿದ್ದೂ ಅಲ್ಲದೇ ಕೋರ್ಟ್ ಸಮಯವನ್ನು ವ್ಯರ್ಥ ಮಾಡಿದ ಕಾರಣ, ಕೋರ್ಟ್ ಯುವತಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ಈ ಹಣವನ್ನು ಪಾವತಿ ಮಾಡದೇ ಹೋದರೆ, ಗೆಳೆಯನ ವಿರುದ್ಧ ಎಫ್‌ಐಆರ್ ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದೂ ಕೋರ್ಟ್ ಎಚ್ಚರಿಕೆ ನೀಡಿದೆ.
ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪ ಪಟ್ಟಿ ಕೂಡ ಸಲ್ಲಿಸಲಿದ್ದಾರೆ. ಒಂದು ವೇಳೆ ಕೋರ್ಟ್ ಎಫ್‌ಐಆರ್ ರದ್ದುಪಡಿಸಲು ಒಲವು ತೋರಿದಲ್ಲಿ ಮಹಿಳೆಗೆ ಭಾರಿ ಮೊತ್ತದ ದಂಡ ವಿಧಿಸಬೇಕೆಂದು ಸರ್ಕಾರ ಪರ ವಕೀಲರು ಮನವಿ ಮಾಡಿದ್ದರು. ಇದನ್ನು ಕೋರ್ಟ್ ಮಾನ್ಯ ಮಾಡಿದೆ.