ಜಪಾನ್‌ನಲ್ಲಿ ನಿರ್ಮಾಣವಾಗಿದೆ ಪಾರದರ್ಶಕ ಟಾಯ್ಲೆಟ್‌: ಥೂ... ಎನ್ನುವ ಮುನ್ನ ಇದನ್ನು ಓದಿ...

toile
Published on

ಟೋಕಿಯೊ: ಜಪಾನ್‌ ಎಂದರೆ ಅಲ್ಲಿ ಹಲವಾರು ಹೊಸಹೊಸ ಬಗೆಯ ಸಂಶೋಧನೆಗಳು ಇದ್ದೇ ಇರುತ್ತವೆ. ಇಲೆಕ್ಟ್ರಾನಿಕ್ಸ್‌ ಸೇರಿದಂತೆ ಹಲವಾರು ತಂತ್ರಜ್ಞಾನಗಳಲ್ಲಿ ಜಪಾನ್‌ ಹೆಸರುವಾಸಿಯಾಗಿದೆ.

ಅದೇ ರೀತಿ ಈಗ ವಿಶಿಷ್ಟ ಎನ್ನುವ ಶೌಚಾಲಯದ ನಿರ್ಮಾಣ ಮಾಡುವ ಮೂಲಕ ಜಪಾನ್‌ ಮತ್ತೊಮ್ಮೆ ಸುದ್ದಿ ಮಾಡಿದೆ. ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿನ ಉದ್ಯಾನಗಳಲ್ಲಿ ಪಾರದರ್ಶಕ ಸಾರ್ವಜನಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ.

ಇದನ್ನು ಓದಿದ ತಕ್ಷಣ ಥೂ... ಎಂದು ಎನಿಸುವುದು ಸಹಜ. ಶೌಚಾಲಯ ಪಾರದರ್ಶಕ ಮಾಡುವುದು ಎಂದರೆ ಅದೇನು ತಲೆಯಪ್ಪಾ ಎನಿಸಬಹುದು. ಆದರೆ ಇಲ್ಲೇ ಇರುವುದು ಇಂಟರೆಸ್ಟಿಂಗ್‌ ವಿಷಯ.

ಶೌಚಾಲಯ ಸ್ವಚ್ಛವಾಗಿದೆಯೇ ಮತ್ತು ಒಳಗೆ ಯಾರೂ ಇಲ್ಲ ಎಂಬುದನ್ನು ಜನರು ಸುಲಭವಾಗಿ ತಿಳಿದುಕೊಳ್ಳಬೇಕು ಎಂಬ ಕಾರಣಕ್ಕೆ ಇಂಥದ್ದೊಂದು ಶೌಚಾಲಯವನ್ನು ಸ್ಥಾಪಿಸಲಾಗಿದೆ.

ಅಂದರೆ ಒಳಗೆ ಯಾರೂ ಇಲ್ಲದ ವೇಳೆ ಶೌಚಾಲಯ ಕ್ಲೀನ್‌ ಆಗಿದೆಯೇ ಎಂಬುದನ್ನು ಹೊರಗಿನಿಂದ ತಿಳಿದುಕೊಳ್ಳಬಹುದು. ಆದರೆ ಅಚ್ಚರಿಯ ವಿಷಯ ಎಂದರೆ ಒಳಗೆ ಜನರು ಇರುವಾಗ ನೋಡಲು ಸಾಧ್ಯವಾಗುವುದಿಲ್ಲ. ಶೌಚಾಲಯದ ನಿರ್ಮಾಣದಲ್ಲಿ ಸ್ಮಾರ್ಟ್‌ ಗ್ಲಾಸ್‌ ಅನ್ನು ಬಳಸಲಾಗಿದ್ದು, ಜನರು ಕಾಣಿಸದೇ ಇರುವಂತೆ ನಿರ್ಮಿಸಲಾಗಿದೆ.

ಅಂದ ಹಾಗೆ ಇದನ್ನು ನಿರ್ಮಾಣ ಮಾಡಿರುವವರು ವಿಶ್ವವಿಖ್ಯಾತ ವಾಸ್ತುಶಿಲ್ಪಿ ಶಿಗೇರು ಬೆನ್‌. ಇವರು ಮರುಬಳಕೆಯ ವಸ್ತುಗಳಲ್ಲಿ ನಿರ್ಮಾಣ ಕಾರ್ಯವನ್ನು ಮಾಡುವುದರಲ್ಲಿ ಪ್ರವೀಣರು.

‘ಯಾವುದೇ ವ್ಯಕ್ತಿಯು ಶೌಚಾಲಯದೊಳಗೆ ಹೋಗಿ ಬಾಗಿಲು ಲಾಕ್‌ ಮಾಡಿದಾಗ, ಪಾರದರ್ಶಕವಾಗಿರುವ ಶೌಚಾಲಯದ ಗೋಡೆಯು ಬದಲಾಗುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ಒಳಗೆ ಕುಳಿತ ವ್ಯಕ್ತಿಯು ಹೊರ ಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆ ಮತ್ತು ಜನರ ಚಲನವಲನಗಳನ್ನು ನೋಡಬಹುದು. ಆದರೆ ಹೊರಗಿನ ವ್ಯಕ್ತಿಗೆ ಒಳಗೆ ನೋಡಲು ಸಾಧ್ಯವಾಗುವುದಿಲ್ಲ. ಇದು ಜಪಾನ್‌ ಟಾಯ್ಲೆಟ್‌ ಯೋಜನೆಯ ವಿಶೇಷ ಭಾಗವಾಗಿದೆ’ ಎಂದಿದ್ದಾರೆ ಶಿಗೇರು.

ಯಾರಾದರೂ ಸಾರ್ವಜನಿಕ ರೆಸ್ಟ್‌ ರೂಂಗೆ ಹೋದಾಗ ಮಾಡುವ ಎರಡು ಮುಖ್ಯ ವಿಷಯಗಳ ನೋಡುತ್ತಾರೆ. ಮೊದಲನೆಯದಾಗಿ ಅದು ಸ್ವಚ್ಛವಾಗಿದೆಯೇ? ಎರಡನೆಯದಾಗಿ ಯಾರಾದರೂ ಒಳಗೆ ಇದ್ದಾರೆಯೇ ಎಂಬುದಾಗಿ ಜನ ತಿಳಿದುಕೊಳ್ಳಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಜಪಾನ್‌ ಈ ಹೊಸ ಮಾದರಿಯ ಟಾಯ್ಲೆಟ್‌ ಅನ್ನು ಪರಿಚಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net