

ಬೆಂಗಳೂರು: ಟಿಪ್ಪು ಸುಲ್ತಾನ್ ಕುರಿತು ವಿವಾದ ಸದ್ಯ ತಣ್ಣಗಾಗಿದೆ. ಬಿಜೆಪಿಯ ಹಲವು ನಾಯಕರು ಟಿಪ್ಪುವಿನ ವಿರುದ್ಧವಾಗಿ ಹೇಳಿಕೆ ನೀಡುತ್ತಿರುವ ಹೊತ್ತಿನಲ್ಲಿಯೇ ಇದೇ ಪಕ್ಷದ ಎಂಎಲ್‌ಸಿಯಾಗಿರುವ ಎಚ್.ವಿಶ್ವನಾಥ ಅವರು ಟಿಪ್ಪು ಸುಲ್ತಾನನ್ನು ಹಾಡಿ ಹೊಗಳಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗ್ಗೊಳ್ಳಿ ರಾಯಣ್ಣ ಪ್ರತಿಮೆಗೆ ಸ್ಥಾಪನೆ ಮಾಡುವ ಬಗ್ಗೆ ಹೋರಾಟದ ಬಗ್ಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡುವ ಸಮಯದಲ್ಲಿ ಅವರು ಟಿಪ್ಪುವಿನ ಗುಣಗಾನ ಮಾಡಿದ್ದಾರೆ.
ಟಿಪ್ಪು ಸುಲ್ತಾನ್ ಈ ನೆಲದ ಮಗ. ಆತ ವೀರ ಹೋರಾಟಗಾರ. ಟಿಪ್ಪು ಯಾವುದೇ ಪಕ್ಷ, ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ ಎಂದು ಕೊಂಡಾಡಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಟಿಷ್ ವಿರುದ್ಧ ಹೋರಾಡಿದ ಕಮಾಂಡರ್. ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಪಠ್ಯದಲ್ಲಿ ಟಿಪ್ಪು ಪಾಠ ಕೈ ಬಿಟ್ಟಿದ್ದಾರೆ ಎನ್ನುವುದು ಸರಿಯಿಲ್ಲ. ಐದರಿಂದ ಏಳನೇ ತರಗತಿವರೆಗೆ ಪಠ್ಯವನ್ನು ತೆಗೆದುಹಾಕಿದ್ದಾರಷ್ಟೇ. ಗಾಂಧೀಜಿಯಿಂದ ಟಿಪ್ಪುವಿನವರೆಗೆ ಎಲ್ಲಾ ವಿದ್ಯಾರ್ಥಿಗಳು ವಿಷಯ ತಿಳಿದುಕೊಳ್ಳಲೇಬೇಕು. ಆಗಲೇ ರಕ್ತ ಒಂಥರಾ ಆಗೋದು ಎಂದು ಪ್ರತಿಕ್ರಿಯಿಸಿದರು.
ಬಿಜೆಪಿಯ ಹಲವರು ಟಿಪ್ಪುವಿನ ವಿರುದ್ಧ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್ ಅವರು, ಅದು ಬೇರೆ ವಿಚಾರ. ಟಿಪ್ಪು ಸುಲ್ತಾನ್ ಯಾವುದೇ ಪಕ್ಷ, ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ. ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ. ಹೀಗಾಗಿ ಟಿಪ್ಪು ಸುಲ್ತಾನ್‌ನನ್ನು ಸಣ್ಣವನಾಗಿ ಮಾಡಬಾರದು’ ಎಂದು ಹೇಳಿದರು.
ಇದೇ ವೇಳೆ ಸಚಿವ ಸ್ಥಾನದ ಆಕಾಂಕ್ಷಿಯ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್ ಅವರು, ’ನನ್ನನ್ನು ಮಂತ್ರಿ ಮಾಡಿ ಎಂದು ನಾನಾಗಿಯೇ ಯಾರನ್ನೂ ಕೇಳುವುದಿಲ್ಲ. ಅವರು ತಿಳಿದು ಮಾಡಬೇಕಷ್ಟೇ. ಈ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ನಾನೂ ಕಾರಣೀಕರ್ತ ಎನ್ನುವುದು ಎಲ್ಲರಿಗೂ ತಿಳಿದದ್ದೇ ಎಂದಿದ್ದಾರೆ.
ನಾನು 1978ರಲ್ಲಿ ರಾಜಕೀಯಕ್ಕೆ ಬಂದವನು. ಮಲ್ಲಿಕಾರ್ಜುನ ಖರ್ಗೆಯವರು 72ರಲ್ಲಿ ಬಂದವರು. ನಾನು ಯಡಿಯೂರಪ್ಪರ ಮನೆಗೆ ಹೋಗಿ ಮಂತ್ರಿ ಮಾಡಿ ಅನ್ನಲ್ಲ ಎಂದರು. ಅಷ್ಟಕ್ಕೂ ನಾನು ಸಚಿವನಾಗಿ ಏನೋ ಸಾಧನೆ ಮಾಡಿ ಬಿಡುತ್ತೇನೆ ಎಂದಲ್ಲ, ಆದರೆ ನಾನು ರಾಜ್ಯದ ಹಿರಿಯ ರಾಜಕಾರಣಿಯಾಗಿರುವ ವಿಷಯ ತಿಳಿದುಕೊಂಡು ಮುಂದಿನದ್ದನ್ನು ಸಂಬಂಧಿಸಿದವರು ಯೋಚಿಸಬೇಕು ಎಂದರು.