

ವಾಷಿಂಗ್ಟನ್: ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದಿದ್ದ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವರ್ ರಾಣಾ ದಾಳಿಯಲ್ಲಿನ ತನ್ನ ಪಾತ್ರಕ್ಕಾಗಿ ಪಾಕಿಸ್ತಾನದ ಅತ್ಯುನ್ನತ ಪದಕವನ್ನು ನೀಡುವಂತೆ ಪಾಕ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದನಂತೆ!
ಅಷ್ಟೇ ಅಲ್ಲ, ಆ ದಾಳಿಯಲ್ಲಿ ಮೃತಪಟ್ಟ 9 ಮಂದಿ ಲಷ್ಕರ್ ಎ ತೊಯ್ಬ (ಎಲ್‌ಇಟಿ) ಉಗ್ರರಿಗೆ ಪಾಕ್ ಸೇನೆಯ ಅತ್ಯುನ್ನತ ಗೌರವ ನೀಡಬೇಕು ಎಂದೂ ಒತ್ತಾಯಿಸಿದ್ದನಂತೆ!
ಅಮೆರಿಕದ ಸರ್ಕಾರವೇ ಅಲ್ಲಿನ ಫೆಡರಲ್ ನ್ಯಾಯಾಲಯಕ್ಕೆ ಈ ವಿಷಯವನ್ನು ತಿಳಿಸಿದೆ. ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ರಾಣಾನನ್ನು ಭಾರತದ ಮನವಿ ಮೇರೆಗೆ ಕಳೆದ ಜೂನ್ 10ರಂದು ಲಾಸ್ ಏಂಜಲೀಸ್‌ನಲ್ಲಿ ಮತ್ತೆ ಬಂಧಿಸಲಾಗಿದ್ದು, ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಲಾಸ್ ಏಂಜಲೀಸ್‌ನ ಜಿಲ್ಲಾ ಕೋರ್ಟ್, ಮುಂದಿನ ವಿಚಾರಣೆಯನ್ನು 2021ರ ಫೆಬ್ರವರಿ 12ಕ್ಕೆ ನಿಗದಿಪಡಿಸಿದೆ.
ಮತ್ತೊಬ್ಬ ಸಂಚುಕೋರ ಡೇವಿಡ್ ಹೆಡ್ಲಿ 26/11 ದಾಳಿಗೂ ಮುನ್ನ ಅದರ ಬಗ್ಗೆ ರಾಣಾನೊಂದಿಗೆ ಚರ್ಚಿಸಿದ್ದ. ಜತೆಗೆ ದಾಳಿ ನಡೆಸಬೇಕಾದ ಸ್ಥಳಗಳ ವಿಡಿಯೋ ಮತ್ತು ಫೋಟೋಗಳನ್ನು ಅವನೊಂದಿಗೆ ಹಂಚಿಕೊಂಡಿದ್ದ.
ದಾಳಿಯಲ್ಲಿನ ತನ್ನ ಪಾತ್ರಕ್ಕಾಗಿ ತನಗೆ ಉನ್ನತ ಪದಕ ಸಿಗಬೇಕು ಎಂಬ ಬೇಡಿಕೆ ಇರಿಸಿದ್ದ ಎಂದು ಭಾರತದ ಪರ ವಕೀಲ ನಿಕೋಲಾ ಟಿ ಹುನ್ನಾ ಹೇಳಿದ್ದಾರೆ. 12 ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಹೆಡ್ಲಿಯನ್ನು ಅಮೆರಿಕದಲ್ಲಿ 2009ರಲ್ಲಿ ಬಂಧಿಸಲಾಗಿದ್ದು, ಆತನಿಗೆ 35 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.