

ಭೋಪಾಲ್: ಕೋವಿಡ್ ಕೇಂದ್ರ ಒಂದರ ಗಲೀಜು ಶೌಚಗೃಹ ನೋಡಿ ಕಿಡಿ ಕಾರಿದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ, ಅಲ್ಲಿದ್ದವರಿಗೆ ಪಾಠ ಹೇಳುವ ಸಲುವಾಗಿ ಖುದ್ದು ಅದನ್ನು ಸ್ವಚ್ಛ ಮಾಡಿ ಮಾದರಿಯಾಗಿದ್ದಾರೆ.
ಮಧ್ಯಪ್ರದೇಶದ ರೇವಾ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಮಿಶ್ರಾ, ಈ ಮೂಲಕ ಅಧಿಕಾರಿಗಳಿಗೆ ಕರ್ತವ್ಯದ ಪಾಠ, ಜವಾಬ್ದಾರಿ ತಿಳಿಸಿಕೊಟ್ಟಿದ್ದಾರೆ. ಮೌಗಂಜ್ ತೆಹ್‍ಸಿಲ್ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ್ದಾಗ ಅಲ್ಲಿರುವ ಕೊಳಕು ಶೌಚಗೃಹ ನೋಡಿ ಅಸಮಾಧಾನಗೊಂಡರು.
ಹಿಂದೆ ಮುಂದೆ ನೋಡದ ಸಂಸದ ಮಿಶ್ರಾ, ಕೈಗೆ ಗ್ಲೌಸ್ ಹಾಕಿಕೊಂಡು ಟಾಯ್ಲೆಟ್‍ನ ಕಮೋಡ್ ಶುಚಿ ಕಾರ್ಯಕ್ಕೆ ಮುಂದಾದರು. ಬ್ರಷ್, ಬಕೆಟ್ ನೀಡುವಂತೆ ಅವರು ಅಲ್ಲಿದ್ದವರಿಗೆ ಹೇಳಿದರು. ಹೀಗೆ ಹೇಳಿದ್ದನ್ನು ಕೇಳುತ್ತಿದ್ದಂತೆಯೇ ಅಧಿಕಾರಿಗಳಿಗೆ ಮುಜುಗರವಾಗಿ ಅದನ್ನು ನೀಡಲಿಲ್ಲ. ಆಗ ಮಿಶ್ರಾ ಕೈಯಲ್ಲೇ ಸ್ವಚ್ಛ ಮಾಡಿದರು! ಹೀಗೆ ಮಾಡುತ್ತಿದ್ದಂತೆಯೇ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.
ಸ್ವಚ್ಛಗೊಳಿಸಿದ ನಂತರ ಮಿಶ್ರಾ ಅವರು, ಕೋವಿಡ್ ಕೇಂದ್ರವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಪಾಠ ಮಾಡಿದರು.