

ಗುವಹಾಟಿ (ಅಸ್ಸಾಂ): ಸುಮಾರು 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಹೊತ್ತ ಐಪಿಎಸ್ ಅಧಿಕಾರಿಗೆ ಬಡ್ತಿ ನೀಡಿ ಪೊಲೀಸ್ ವರಿಷ್ಠಾಧಿಕಾರಿ ಮಾಡಿರುವ ಅಚ್ಚರಿಯ ಘಟನೆಯಿಂದು ಅಸ್ಸಾಂನಲ್ಲಿ ನಡೆದಿದೆ.
ಈ ಅಧಿಕಾರಿಯೇ ದೌರ್ಜನ್ಯ ಎಸಗಿದ್ದಾರೆ ಎಂಬ ಬಗ್ಗೆ ಸಾಕಷ್ಟು ಪುರಾವೆಗಳಿದ್ದರೂ, ಈ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದ್ದರೂ ಅಸ್ಸಾಂನ ಕಮ್ರೂಪ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿರುವುದು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಅಧಿಕಾರಿಯ ಮನೆಯಲ್ಲಿ 2019ರ ಡಿಸೆಂಬರ್ 31ರಂದು ಪಾರ್ಟಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಇತರ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಕುಟುಂಬದವರು ಇದರಲ್ಲಿ ಪಾಲ್ಗೊಂಡಿದ್ದರು. ಆಗ ಪೊಲೀಸ್ ಅಧಿಕಾರಿಯೊಬ್ಬರ 13 ವರ್ಷದ ಮಗಳು ಕೂಡ ಪಾರ್ಟಿಗೆ ಬಂದಿದ್ದಳು.
ಆ ಸಂದರ್ಭದಲ್ಲಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಈ ಅಧಿಕಾರಿಯ ಮೇಲೆ ಇದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಎಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಅಸ್ಸಾಂನ ಸಿಐಡಿಗೆ ವರ್ಗಾಯಿಸಲಾಗಿತ್ತು. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 354 ಎ ಅಡಿಯಲ್ಲಿ ಹಾಗೂ ಪೊಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ.
ಅಸ್ಸಾಂ ಅಪರಾಧ ತನಿಖಾ ಇಲಾಖೆ ತನಿಖೆ ನಡೆಸಿ ಇವರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಾಕಷ್ಟು ಪುರಾವೆಗಳು ದೊರೆತಿವೆ ಎಂದು ಉಲ್ಲೇಖಿಸಿದೆ. ಲೈಂಗಿಕ ದೌರ್ಜನ್ಯದ ನಂತರ ಬಾಲಕಿ ಜರ್ಜರಿತಳಾಗಿದ್ದು, ಮಾನಸಿಕವಾಗಿ ಕುಗ್ಗಿ ಹೋಗಿರುವ ಬಗ್ಗೆಯೂ ತನಿಖಾ ಸಂಸ್ಥೆ ಚಾರ್ಜ್‌ಷೀಟ್‌ನಲ್ಲಿ ತಿಳಿಸಿತ್ತು. ಆದರೆ ಇದಿನ್ನೂ ಇತ್ಯರ್ಥಕ್ಕೆ ಬಾಕಿ ಇರುವ ನಡುವೆಯೇ ಬಡ್ತಿ ನೀಡಲಾಗಿದೆ. ಈ ಕುರಿತು ವಿವರಣೆ ನೀಡಿರುವ ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ವಿಷಯವನ್ನೂ ಕೋರ್ಟ್‌ನಲ್ಲಿ ಇದೆ. ಕೋರ್ಟ್ ತೀರ್ಪು ನೀಡಿ ಅಪರಾಧಿ ಎಂದು ಸಾಬೀತಾದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು, ಸದ್ಯ ಅವರನ್ನು ಪೊಲೀಸ್ ವರಿಷ್ಠಾಧಿಕಾರಿ ಸೇವೆಗೆ ಬಡ್ತಿ ನೀಡಲಾಗಿದೆ ಎಂದಿದ್ದಾರೆ.