ಮನೆಗೆ ನುಗ್ಗಿ ಮಹಿಳೆಯ ಚಿನ್ನಾಭರಣ ಲೂಟಿ ಮಾಡಿ ಮಂಗಗಳು ಎಸ್ಕೇಪ್‌!

monkey
Published on

ತಂಜಾವೂರು (ತಮಿಳುನಾಡು): ಮನೆಯೊಳಕ್ಕೆ ನುಗ್ಗಿ ಚಿನ್ನಾಭರಣ ಲೂಟಿ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮನುಷ್ಯ ಕಳ್ಳರು.

ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಕೋತಿಗಳ ಗುಂಪೊಂದು ಈ ಕೃತ್ಯ ಎಸಗಿದೆ! ಇಂಥದ್ದೊಂದು ಅಚ್ಚರಿಯ ಸಂಗತಿ ನಡೆದಿರುವುದು ತಮಿಳು ನಾಡಿನ ತಂಜಾವೂರಿನ ತಿರುವೈಯಾರುವಿನಲ್ಲಿ. ಈ ಪ್ರಕರಣ ಎಲ್ಲರಿಗೂ ಎಚ್ಚರಿಕೆಯ ಗಂಟೆ ಕೂಡ ಆಗಿದೆ.

ಮಂಗಗಳ ಗುಂಪೊಂದು ಮಹಿಳೆಯೊಬ್ಬರ ಮನೆಗೆ ನುಗ್ಗಿ, ಅವರು ಕೂಡಿಟ್ಟಿದ್ದ 25 ಸಾವಿರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದೆ. ತಮ್ಮ ಜೀವಿತಾವಧಿಯಲ್ಲಿ ದುಡಿದ ಹಣ ಇದಾಗಿತ್ತು ಎಂದು ಮಹಿಳೆ ಕಂಬನಿ ಮಿಡಿಯುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಮಂಗಗಳು ಲೂಟಿ ಮಾಡಲು ಬಂದದ್ದು ಚಿನ್ನಾಭರಣ ಅಥವಾ ದುಡ್ಡನ್ನಲ್ಲ. ಬದಲಿಗೆ ಅದು ಅಕ್ಕಿ ಹಾಗೂ ಬಾಳೆಹಣ್ಣನ್ನು ದೋಚಲು ಬಂದಿತ್ತು. ಆದರೆ ಅಚಾನಕ್‌ ಆಗಿ ದುಡ್ಡು, ಚಿನ್ನವೂ ಅದರ ಪಾಲಾಗಿದೆ.

ಅದು ಹೇಗೆಂದರೆ, ಇಲ್ಲಿನ ವೀರಮಾಂಗುಡಿ ಗ್ರಾಮದ ಕುತಿರಾಯ್‌ ಕೋವಿಳ್‌ ಬೀದಿಯಲ್ಲಿನ ಗುಡಿಸಲೊಂದರಲ್ಲಿ ವಾಸಿಸುವ ಶರತಾಂಬಳ್ ಹೆಸರಿನ ಮಹಿಳೆಯೊಬ್ಬರು ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೋತಿಗಳು ಗುಡಿಸಲೊಳಗೆ ಬಂದು ಬಕೆಟ್‌ನಲ್ಲಿ ಇಟ್ಟಿದ್ದ ಅಕ್ಕಿಯ ಬ್ಯಾಗ್‌ ಹಾಗೂ ಬಾಳೆಹಣ್ಣುಗಳನ್ನು ದೋಚಿಕೊಂಡು ಹೋಗಿವೆ. ಆದರೆ, ಆ ಅಕ್ಕಿ ಬ್ಯಾಗ್‌ನಲ್ಲಿ ಮಹಿಳೆ ತನ್ನ ಜೀವಿತದ ಉಳಿತಾಯ ಹಾಗೂ ಚಿನ್ನವನ್ನು ಇಟ್ಟಿದ್ದರು.

ಕೋತಿಗಳು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿ ಮಹಿಳೆ ಕೂಗಿಕೊಂಡಿದ್ದಾರೆ. ಕೋತಿಗಳನ್ನು ಸ್ಥಳೀಯರು ಬೆನ್ನಟ್ಟಿದಾಗ ಅವುಗಳು ಬ್ಯಾಗ್‌ನೊಂದಿಗೆ ಅಲ್ಲಿಂದ ಪರಾರಿಯಾಗಿವೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿ ಬಹಳ ಕಷ್ಟಪಟ್ಟು ಈ ಹಣವನ್ನು ಶರತಂಬಾಳ್ ಕೂಡಿಟ್ಟಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net