

ನವದೆಹಲಿ: ಬಳಕೆದಾರರ ಪ್ರತಿಯೊಂದು ಹೆಜ್ಜೆಯ ಮೇಲೂ ಕಣ್ಣಿಡುವ ಈಗಿನ ತಂತ್ರಜ್ಞಾನ ಬಹಳ ಅಪಾಯಕಾರಿ. ಅದರಲ್ಲಿಯೂ ಮುಖ್ಯವಾಗಿ ಸ್ಮಾರ್ಟ್‌ಫೋನ್. ಇದೇ ಕಾರಣಕ್ಕೆ ಯೋಧರಿಗೆ ಇದರ ಬಳಕೆಯ ಕುರಿತಂತೆ ಹಲವಾರು ನಿಬಂಧನೆಗಳು ಇವೆ.
ನಮ್ಮ ಯೋಧರ ಪ್ರತಿಯೊಂದು ಹೆಜ್ಜೆಗಳನ್ನು ಹಾಗೂ ಅವರ ತಯಾರಿಸುವ ಯೋಜನೆಗಳು, ಅವರು ಇರುವ ಸ್ಥಳ ಎಲ್ಲವನ್ನೂ ಸ್ಮಾರ್ಟ್‌ಫೋನ್‌ಗಳು ಪತ್ತೆಹಚ್ಚಬಲ್ಲವು. ಅದರಲ್ಲಿಯೂ ಅತಿಹೆಚ್ಚು ಸ್ಮಾರ್ಟ್‌ಫೋನ್‌ಗಳ ಕಂಪನಿ ಇರುವುದು ಚೀನಾದಲ್ಲಿಯೇ.
ಇದೇ ಕಾರಣಕ್ಕೆ ಮೊಬೈಲ್ ಪೋನ್ ಬಳಕೆ ಮಾಡುವ ಯೋಧರಿಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಸೇನೆಯ ಸುರಕ್ಷತೆಗಾಗಿ ಹಾಗೂ ಗೋಪ್ಯ ಮಾಹಿತಿ ಹೊರಗೆ ಸೋರಿಕೆಯಾಗದಿರಲೆಂದು ಈ ಮಾರ್ಗಸೂಚಿ ಹೊರಡಿಸಲಾಗಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಹೊಸ ಮಾರ್ಗಸೂಚಿ ಹೊರಡಿಸಿದ್ದು, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅವುಗಳ ಫೋನ್ ಬಳಕೆಯನ್ನು ನಿಷೇಧ ಮಾಡಲಾಗಿದೆ.
ಯೋಧರು ಕಚೇರಿಗೆ ಬರುವಾಗ ತಮ್ಮ ಬಳಿ ಇರುವ ಸ್ಮಾರ್ಟ್‌ಫೋನ್ ನಿಗದಿತ ಕೌಂಟರ್‌ನಲ್ಲಿ ಇಟ್ಟು ಬರಬೇಕು. ಇವುಗಳನ್ನು ಯಾವುದೇ ಕಾರಣಕ್ಕೂ ಕಚೇರಿಯ ಒಳಗೆ, ಕಾನ್ಫರೆನ್ಸ್ ಹಾಲ್‌ಗಳು, ಕಾರ್ಯಾಚರಣೆ ಕೊಠಡಿಗಳಲ್ಲಿ ಬಳಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸಿಆರ್‌ಪಿಎಫ್ ಮೊಬೈಲ್ ಫೋನ್‌ಗಳನ್ನು ಎರಡು ವರ್ಗವಾಗಿ ವಿಂಗಡಿಸಿದೆ. ಒಂದು ಸಾಮಾನ್ಯ ಫೋನ್ ಹಾಗೂ ಇನ್ನೊಂದು ಸ್ಮಾರ್ಟ್‌ಫೋನ್. ಇವುಗಳಲ್ಲಿ ಸ್ಮಾರ್ಟ್‌ಫೋನ್ ಅತ್ಯಂತ ಅಪಾಯಕಾರಿ. ಆದ್ದರಿಂದ ಇದಕ್ಕೆ ಅತಿ ಹೆಚ್ಚು ನಿಯಮಗಳನ್ನು ಹೇರಲಾಗಿದೆ.
ಮುಖ್ಯಸ್ಥರ ಅನುಮೋದನೆಯ ನಂತರವೇ ಸ್ಮಾರ್ಟ್‌ಫೋನ್ ಬಳಸಲು ಅನುಮತಿ ನೀಡಲಾಗುತ್ತದೆ. ಸಾಮಾನ್ಯ ಮೊಬೈಲ್ ಫೋನ್‌ಗಳನ್ನು ಕರೆಗಳಿಗೆ ಬಳಸಲು ಅನುಮತಿ ಕೊಡಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೇಲೆಯೂ ಸಾಕಷ್ಟು ನಿಬಂಧನೆಗಳನ್ನು ಹೊರಡಿಸಲಾಗಿದೆ. ಸಾಮಾಜಿಕ ಜಾಲತಾಣಗಳು, ಬ್ಲಾಗ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಎಲ್ಲ ವಿಷಯಗಳಿಗೆ ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ. ಆದ್ದರಿಂದ ಅತ್ಯಂತ ಗೋಪ್ಯತೆ ಕಾಪಾಡಿಕೊಳ್ಳಬೇಕು ಎಂದು ಹೇಳಲಾಗಿದೆ.