

ಮಂಗಳೂರು: ಮಂಗಳೂರಿನ ಕಾಲೇಜೊಂದರ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಕೊನೆಗೂ ಸಿಕ್ಕಿದ್ದಾರೆ. ಹಲವು ದಿನಗಳಿಂದ ಪೊಲೀಸರು ಹಾಗೂ ಪಾಲಕರ ನಿದ್ದೆಗೆಡಿಸಿದ್ದ ಈ ಪ್ರಕರಣ ಸುಖಾಂತ್ಯಗೊಂಡಿದೆ. ಈ ಮೂವರು ವಿದ್ಯಾರ್ಥಿನಿಯರು ಚೆನೈನಲ್ಲಿ ಪತ್ತೆಯಾಗಿದ್ದಾರೆ.
ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರಾದ ಇವರು, ಸೆ. 21ರಂದು ಹಾಸ್ಟೆಲ್ ಕಿಟಕಿಯ ರಾಡ್ ಮುರಿದು ಪರಾರಿಯಾಗಿದ್ದರು. 'ನಾವು ಹೋಗುತ್ತಿದ್ದೇವೆ, ಕ್ಷಮಿಸಿ' ಎಂದು ಪತ್ರ ಬರೆದಿಟ್ಟು ಹಾಸ್ಟೆಲ್‍ನ ಕಿಟಕಿಯ ರಾಡ್ ಮುರಿದು ಪರಾರಿಯಾಗಿದ್ದರು. ಇದು ಹಾಸ್ಟೆಲ್, ಕಾಲೇಜಿನ ಸಿಬ್ಬಂದಿಗೂ ಆತಂಕವನ್ನುಂಟು ಮಾಡಿತು. ಸಿಸಿಟಿವಿಯಲ್ಲಿ ವಿದ್ಯಾರ್ಥಿನಿಯರು ಗಂಟುಮೂಟೆ ಕಟ್ಟಿಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು.
ಚೆನ್ನೈನಲ್ಲಿ ಪತ್ತೆಯಾದ ಮೂವರು ವಿದ್ಯಾರ್ಥಿನಿಯರನ್ನು ಕುಡ್ಲ ಪೊಲೀಸರು ಮಂಗಳೂರಿಗೆ ಕರೆತಂದಿದ್ದಾರೆ. ವಿದ್ಯಾರ್ಥಿನಿಯರ ತಂಡ ಮಂಗಳೂರಿನಿಂದ ರೈಲಿನ ಮೂಲಕ ಕೊಯಮತ್ತೂರು ತೆರಳಿದ್ದರು. ಕೊಯಮತ್ತೂರಿನಿಂದ ಬಸ್ ಮೂಲಕ ಪಾಂಡಿಚೇರಿಗೆ ಪ್ರಯಾಣ ಬೆಳಸಿ, ಮತ್ತೆ ಪಾಂಡಿಚೇರಿಯಿಂದ ವಾಪಸ್ ಚೆನೈಗೆ ಬಂದಿದ್ದರು. ದೂರದ ಊರು ಸುತ್ತಾಡಿ ಮರಳಿ ಮನೆ ಸೇರಲು ವಿದ್ಯಾರ್ಥಿನಿಯರು ನಿರ್ಧರಿಸಿದ್ದರು ಎಂಬ ವಿಷಯ ಇದೀಗ ಬಯಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಶೈಕ್ಷಣಿಕ ಒತ್ತಡದಿಂದ ತಾವು ಪರಾರಿಯಾಗಿರುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. (ದಿಗ್ವಿಜಯ ನ್ಯೂಸ್)