

ಉತ್ತರಾಖಂಡ: ಹರಿದ್ವಾರದ ರೆಸಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಂಕಿತಾ ಭಂಡಾರಿಯ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರೋರಾತ್ರಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಶುಕ್ರವಾರ) ಉತ್ತರಾಖಂಡದಲ್ಲಿನ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಎಂಬುವವರ ಪುತ್ರ ಪುಲಕಿತ್ ಆರ್ಯನನ್ನು ಪೊಲೀಸರು ಬಂಧಿಸಿದ್ದರು.
'ವಾರದ ಹಿಂದೆ ನಾಪತ್ತೆಯಾಗಿ, ರೆಸಾರ್ಟ್ನಲ್ಲಿಯೇ ಕೊಲೆಯಾಗಿದ್ದರೂ ಆಕೆಯ ಸಾವಿನ ಬಗ್ಗೆ ತನಿಖೆ ನಡೆಸಲು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ, ಬಿಜೆಪಿ, ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ' ಎಂದು ಕಾಂಗ್ರೆಸ್ ನಾಯಕರು ಆರೋಪಿಸಲು ಶುರು ಮಾಡಿದ್ದರು. ಆದರೆ ನ್ಯಾಯ ಎಲ್ಲರಿಗೂ ಒಂದೇ ಎಂದು ಹೇಳಿದ ಉತ್ತರಾಖಂಡದ ಮುಖ್ಯಮಂತ್ರಿ ಬಿಜೆಪಿ ಪಿ.ಎಸ್.ಧಾಮಿ ಅವರು ಕೊಲೆ ನಡೆದ ರೆಸಾರ್ಟ್ ಅನ್ನು ಬುಲ್ಡೋಜರ್ ಬಳಸಿ ಕೆಡವಲು ಆದೇಶಿಸಿದ್ದಾರೆ. ಈ ಆದೇಶದ ಅನ್ವಯ ಇದಾಗಲೇ ಕಟ್ಟಡ ನೆಲಸಮ ಪ್ರಕ್ರಿಯೆ ನಡೆದಿದೆ. ರೆಸಾರ್ಟ್ ಕೆಡವಲು ಕಾರಣ, ಕೊಲೆ ನಡೆದ ಹಾಗೂ ಕೊಲೆಯಾದ ಯುವತಿ ಅಂಕಿತಾ ಭಂಡಾರಿ ಕೆಲಸ ಮಾಡುತ್ತಿದ್ದ ವಂತರಾ ರೆಸಾರ್ಟ್ ಆರೋಪಿ ಪುಲಕಿತ್ಗೆ ಸೇರಿದ್ದು.
ಸಿಎಂ ಅವರ ಸೂಚನೆ ಮೇರೆಗೆ ಆರೋಪಿಗಳ ಆಸ್ತಿಯನ್ನು ನೆಲಸಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ವಿಶೇಷ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ತಿಳಿಸಿದ್ದಾರೆ.
ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆ ಕುಟುಂಬದವರಂತೆ ಪೊಲೀಸ್ ಠಾಣೆಯಲ್ಲಿ ಪುಲಕಿತ್ ಆರ್ಯ ದೂರು ದಾಖಲಿಸಿದ್ದ. ಆದರೆ ಇಬ್ಬರು ಸಿಬ್ಬಂದಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾರೆಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಸಿಬ್ಬಂದಿಯನ್ನೂ ಬಂಧಿಸಲಾಗಿದೆ. ಯುವತಿ ಕುಟುಂಬದವರು ಪುಲಕಿತ್ ಆರ್ಯನ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. (ಏಜೆನ್ಸೀಸ್)