

ಉರೈನ್ (ಉತ್ತರ ಪ್ರದೇಶ): ಮಗಳು ಓಡಿಹೋಗಿ ಮದುವೆಯಾದಳು ಎನ್ನುವ ಕಾರಣಕ್ಕೆ ಮಗಳು ಮತ್ತು ಆಕೆಯ ಪತಿಯನ್ನು ಕೊಚ್ಚಿ ಕೊಲೆ ಮಾಡಿದ ಅಪ್ಪ- ಅಮ್ಮ ಸೇರಿದಂತೆ ನಾಲ್ವರಿಗೆ ಗಲ್ಲುಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ಬದೌನ್ ಕೋರ್ಟ್ ಆದೇಶಿಸಿದೆ.
2017ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಇದಾಗಿದೆ. ಈ ಐವರ ಕುಕೃತ್ಯಕ್ಕೆ ಬಲಿಯಾದವರು ಗೋವಿಂದ್ (24) ಮತ್ತು ಆಶಾ (22).
ಆಗಿದ್ದೇನು? ಉರೈನ ಗ್ರಾಮದ ನಿವಾಸಿ ಪಪ್ಪು ಸಿಂಗ್ ಅವರ ಮಗ ಗೋವಿಂದ್ ಹಾಗೂ ಕಿಶನ್ಪಾಲ್ ಅವರ ಪುತ್ರಿ ಆಶಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಮದುವೆಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರೂ ಉತ್ತರ ಪ್ರದೇಶದಿಂದ ದೆಹಲಿಗೆ ಓಡಿಹೋಗಿ ಮದುವೆಯಾಗಿದ್ದರು.
ಇದು ಆಶಾ ಅವರ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಮಗಳು ಹಾಗೂ ಅಳಿಯನನನ್ನು ಮುಗಿಸುವ ಪ್ಲ್ಯಾನ್ ಹಾಕಿದ ಅವರು ತಾವೇ ಖುದ್ದು ನಿಂತು ಇಬ್ಬರ ಮದುವೆ ಮಾಡಿಸುವುದಾಗಿ ಹೇಳಿ ಇಬ್ಬರನ್ನೂ ಮನೆಗೆ ಕರೆಸಿಕೊಂಡಿದ್ದರು. ಇದನ್ನು ನಂಬಿ ಆಶಾ ಮತ್ತಿ ಗೋವಿಂದ್ ವಾಪಸಾಗಿದ್ದರು.
ಆಶಾಳ ತಂದೆ ಕಿಶನ್ಪಾಲ್, ತಾಯಿ ಜಲಧಾರ ಹಾಗೂ ಆಶಾಳ ಸಹೋದರರಾದ ವಿಜಯಪಾಲ್ ಮತ್ತು ರಾಮ್ವೀರ್ ಮೊದಲೇ ಪ್ಲ್ಯಾನ್ ಮಾಡಿಕೊಂಡಂತೆ ಮೊದಲು ಗೋವಿಂದ್ನ ತಲೆಗೆ ಹಿಂಬದಿಯಿಂದ ಹೊಡೆದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದರು. ಇದನ್ನು ನೋಡಿ ತಪ್ಪಿಸಲು ಬಂದ ಮಗಳನ್ನೂ ಅದೇ ಕೊಡಲಿಯಿಂದ ಹೊಡೆದು ಸಾಯಿಸಿದರು. ಈ ಕುರಿತು ಗೋವಿಂದ್ ಅವರ ಪಾಲಕರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು.
ಇವರ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಂಥ ಬರ್ಬರ ಕೃತ್ಯ ಎಸಗಿದ ಕುಟುಂಬಸ್ಥರಿಗೆ ನ್ಯಾಯಾಧೀಶ ಪಂಕಜ್ ಅಗರವಾಲ್ ಮರಣದಂಡನೆ ವಿಧಿಸಿದ್ದಾರೆ. (ಏಜೆನ್ಸೀಸ್)