

ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ಮದುವೆಗೆ ಕೆಲವೊಂದು ಷರತ್ತು ವಿಧಿಸಲಾಗಿದೆ. ಆದರೆ ಇಲ್ಲೊಂದು ಮದುವೆಯಲ್ಲಿ ಮದುಮಕ್ಕಳೇ ವಿಚಿತ್ರ ಎನಿಸುವಂಥ ಷರತ್ತು ವಿಧಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಮದುವೆಗೆ ಬರುವ ಅತಿಥಿಗಳು ಏನು ಮಾಡಬೇಕು. ಏನು ಮಾಡಬಾರದು ಎಂಬ ಉದ್ದನೆಯ ಪಟ್ಟಿಯನ್ನು ಮಾಡಿರುವ ಮದುಮಕ್ಕಳು ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡುವುದಿದ್ದರೆ ಮಾತ್ರ ಮದುವೆಗೆ ಬನ್ನಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ನಿಯಮ ಪಾಲನೆ ಮಾಡುವ ಮನಸ್ಸು ಇದ್ದವರು ಮದುವೆಗೆ ಬರುವ ಬಗ್ಗೆ ಇ-ಮೇಲ್ ಮೂಲಕ ತಿಳಿಸಿ ಎಂದು ಹೇಳಿದ್ದಾರೆ.
ಇದನ್ನು ನೋಡಿದವರ ಪೈಕಿ ಹಲವರು ಬಿದ್ದು ಬಿದ್ದು ನಕ್ಕರೆ, ಇನ್ನು ಕೆಲವರು ನಾವು ಇದಕ್ಕೆ ಬಹಿಷ್ಕಾರ ಹಾಕುತ್ತೇವೆ ಎಂದಿದ್ದಾರೆ. ಇದು ಎಲ್ಲಿ ನಡೆದಿರುವ ಮದುವೆ, ಯಾರದ್ದು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇದು ಭಾರಿ ಸದ್ದು ಮಾಡುತ್ತಿದೆ.
ಏನೇನಿವೆ ನೋಡಿ ಷರತ್ತುಗಳು
* ಮದುವೆಗೆ ಬರುವವರು 15 ರಿಂದ 30 ನಿಮಿಷ ಬೇಗನೇ ಬರಬೇಕು.
* ಬರುವಾಗ ಬಿಳಿ, ಕ್ರೀಮ್, ಬೂದು ಬಣ್ಣದ ಬಟ್ಟೆಗಳನ್ನು ಧರಿಸಬಾರದು.
* ತಲೆಗೂದಲನ್ನು ಬಾಬ್ ಕಟ್ ತರಹ ಅಥವಾ ಪೋಣಿಸಿ ಕಟ್ಟಿದರೆ ಮಾತ್ರ ವಿವಾಹಕ್ಕೆ ಹಾಜರಾಗಬೇಕು.
* ಮುಖಕ್ಕೆ ಮೇಕಪ್ ಹಚ್ಚಿಕೊಂಡು ಬರಬಾರದು.
* ಮದುವೆಯ ಕ್ಷಣಗಳನ್ನು ವಿಡಿಯೋ ಮಾಡಬಾರದು.
* ನಾವು ಸೂಚಿಸುವವರೆಗೂ ಫೇಸ್ ಬುಕ್ ಓಪನ್ ಮಾಡಬಾರದು
* ಮದುವೆ ಫೋಟೋ ಪೋಸ್ಟ್ ಮಾಡಬೇಕಾದರೆ ಹ್ಯಾಶ್ ಟ್ಯಾಗ್ ಉಪಯೋಗಿಸಬೇಕು.
* ವಧುವಿನ ಜತೆ ಯಾರೂ ಮಾತನಾಡಬಾರದು.
* ಮದುವೆಗೆ ಆಗಮಿಸುವವರು $75 (ಸುಮಾರು ಐದೂವರೆ ಸಾವಿರ ರೂ) ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಉಡುಗೊರೆಗಳನ್ನು ತರಬೇಕು.