ಅತ್ತೆ ಮಗಳ ಮೇಲೆ ಕಣ್ಣುಹಾಕಿ ಆಸ್ಪತ್ರೆಗೆ ದಾಖಲಾದ ಮೈಸೂರು ಯುವಕ! ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯ ಸೆರೆ

youth
Published on

ಮೈಸೂರು: ಅತ್ತೆ ಮಗಳ ಮೇಲೆ ಕಣ್ಣುಹಾಕುತ್ತಿದ್ದಾನೆಂದು ಆರೋಪಿಸಿ ಪಿರಿಯಾಪಟ್ಟಣ ತಾಲೂಕಿನ ಉತ್ತೇನಹಳ್ಳಿಯ ನಿವಾಸಿ ರಾಜು(25) ಎಂಬ ಯುವಕನನ್ನು ಸಂಬಂಧಿಕರು ಥಳಿಸಿರುವ ಘಟನೆ ನಡೆದಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ರಾಜು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಪಂಚವಳ್ಳಿ ಸರ್ಕಲ್ ಬಳಿ ಇರುವ ಪೆಟ್ರೋಲ್ ಬಂಕ್ ಮುಂದೆ ಯುವತಿ ಮನೆ ಇದೆ. ಇದರ ಮುಂಭಾಗದಲ್ಲೇ ಇರುವ ಕಟ್ಟಡದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಕಿರಣ್ ಮಳಿಗೆ ಬಾಡಿಗೆ ಪಡೆದುಕೊಂಡಿದ್ದ. ಮೆಣಸಿನಕಾಯಿ ತುಂಬಲು ರಾಜು ಆಗಾಗ್ಗೆ ಮಳಿಗೆಗೆ ಬರುತ್ತಿದ್ದ. ಈ ವೇಳೆ ಕಿರಣ್ ನ ಅತ್ತೆ ಮಗಳ ಮೇಲೆ ರಾಜು ಕಣ್ಣು ಹಾಕಿದ್ದ ಎಂದು ಆರೋಪಿಸಲಾಗಿದೆ.

ಆಗಾಗ್ಗೆ ಬರುತ್ತಿದ್ದ ರಾಜು ಯುವತಿಗೆ ಲೈನ್ ಹೊಡೆಯುತ್ತಿದ್ದಾನೆಂದು ಆರೋಪ ಹೊರೆಸಿ ಆತನಿಗೆ ಒಂದೆರಡು ಬಾರಿ ವಾರ್ನಿಂಗ್ ಸಹ ಕೊಟ್ಟಿದ್ದರು. ಆದರೆ ಮೆಣಸಿನಕಾಯಿ ಅಂಗಡಿಗೆ ಬಂದಾಗೆಲ್ಲಾ ರಾಜು ಮೇಲೆ ಅನುಮಾನ ಹೆಚ್ಚಾಗುತ್ತಿತ್ತು.

ಈ ಹಿನ್ನಲೆ ನಿನ್ನೆ ಸಂಜೆ ಪೆಟ್ರೋಲ್ ಹಾಕಿಸಲು ಬಂದ ರಾಜು ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಾಲಿನ ಕ್ಯಾನ್​ನಿಂದ ಹಿಗ್ಗಾಮುಗ್ಗ ಥಳಿಸಿರುವುದನ್ನು ಇದರಲ್ಲಿ ಕಾಣಬುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್, ಪುನೀತ್, ಪ್ರಕಾಶ್ ಹಾಗೂ ನವೀನ್ ಎಂಬುವವರನ್ನು ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net