

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಅವರು ನಟಿಸಿರುವ ಅನೇಕ ಚಿತ್ರಗಳಲ್ಲಿ ಅವರಿಗೆ ಹೆಸರು ತಂದುಕೊಟ್ಟ ಚಿತ್ರಗಳ ಪೈಕಿ 'ಜಿಂದಗಿ ನಾ ಮಿಲೇಗಿ ದೊಬಾರಾ' (ಬದುಕು ಮತ್ತೊಮ್ಮೆ ಸಿಗುವುದಿಲ್ಲ). ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಳ್ಳದಿದ್ದರೂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು ಈ ಚಿತ್ರ, ಜತೆಗೆ ಹೃತಿಕ್ ಅವರ ಜನಪ್ರಿಯತೆಯೂ ಹೆಚ್ಚಾಗಿತ್ತು.
ಬೇರೆ ಚಿತ್ರಗಳಿಗಿಂತಲೂ ಈ ಚಿತ್ರ ಸ್ವಲ್ಪ ವಿಭಿನ್ನ ಎನಿಸಿಕೊಂಡಿದ್ದರೂ ಈ ಚಿತ್ರಕ್ಕೆ ಒಪ್ಪಿಕೊಂಡಾಗ ಹೃತಿಕ್ ತಂದೆ ಬಾಲಿವುಡ್ ನಟ ರಾಕೇಶ್ ರೋಷನ್ ಸೇರಿದಂತೆ ಹಲವು ಸ್ನೇಹಿತರು ನೀನು ಜೀವನದಲ್ಲಿ ಬಹುದೊಡ್ಡ ತಪ್ಪು ಮಾಡಿಬಿಟ್ಟೆ ಎಂದಿದ್ದರಂತೆ. ಈ ಚಿತ್ರಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅದರ ನೆನಪುಗಳನ್ನು ಹೃತಿಕ್ ಹಂಚಿಕೊಂಡಿದ್ದಾರೆ.
'ಜಿಂದಗಿ ನಾ ಮಿಲೇಗಿ ದೊಬಾರಾ' ಚಿತ್ರದಲ್ಲಿ ಅರ್ಜುನ್ ಸಲೂಜಾ (ಹೃತಿಕ್) ಜೀವನದಲ್ಲಿ ಹಣ ಗಳಿಸುವುದೊಂದೇ ಗುರಿಯೆಂದು ತಿಳಿದಿರುತ್ತಾನೆ. ತನ್ನ ಸ್ನೇಹಿತ ಹಾಗೂ ಗೆಳತಿಯ ಸಹವಾಸದಿಂದ ಇದರ ಹೊರತಾದ ಹೊಸ ಜೀವನದ ದರ್ಶನ ಅರ್ಜುನ್ಗಾಗುತ್ತದೆ. ಆದರೆ ಈ ಪಾತ್ರ ಅಷ್ಟು ಚೆನ್ನಾಗಿಲ್ಲದ ಕಾರಣ, ಒಪ್ಪಿಕೊಳ್ಳಬಾರದಿತ್ತು ಎಂದೇ ಎಲ್ಲರೂ ಹೇಳಿದರು. ಆದರೆ ನಾನು ಚಿತ್ರವನ್ನು ಒಪ್ಪಿಕೊಂಡಿದ್ದೇ ಪಾತ್ರಗಳ ಏಕತಾನತೆಯಿಂದ ಹೊರಬರುವುದಕ್ಕೆ ಎಂದಿದ್ದಾರೆ ಹೃತಿಕ್.
ಆ ಸಂದರ್ಭದಲ್ಲಿ ನಾನು ನಿಜ ಜೀವನದಲ್ಲಿಯೂ ಒಂದು ರೀತಿಯ ತುಮುಲ ಅನುಭವಿಸುತ್ತಿದ್ದೆ. ಅದನ್ನು ಮುರಿಯಲು ನಾನು ನಿಜ ಜೀವನದಲ್ಲೂ ಪ್ರಯತ್ನಿಸುತ್ತಿದ್ದೆ. ಅಂತಹ ಸಂದರ್ಭದಲ್ಲೇ ಅರ್ಜುನ್ ಪಾತ್ರ ಹುಡುಕಿಕೊಂಡು ಬಂತು. ಅದಕ್ಕಾಗಿಯೇ ಒಪ್ಪಿಕೊಂಡೆ. ನನ್ನದೇ ಆದ ಸ್ವಂತ ವ್ಯಕ್ತಿತ್ವವನ್ನು ಕಂಡುಕೊಳ್ಳಬೇಕು ಎನ್ನುವುದು ನನ್ನ ಕನಸಾಗಿತ್ತು. ನಾನು ಹೃತಿಕ್ ಆಗಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವತ್ತಲೇ ನನ್ನ ಆಲೋಚನೆಯೆಲ್ಲಾ ಕೇಂದ್ರೀಕೃತವಾಗಿತ್ತು ಎಂದು ಅವರು ಹೇಳಿದ್ದಾರೆ.
ಸ್ಟಾರ್ಗಿರಿಯೆಲ್ಲಾ ನನ್ನ ಆದ್ಯತೆಯೇ ಆಗಿರಲಿಲ್ಲ. ಅದನ್ನೇನಿದ್ದರೂ ಜನ ಪ್ರೀತಿಯಿಂದ ನಮಗೆ ನೀಡುವುದಷ್ಟೇ. ನಾವು ಮಾಡುವ ಕೆಲಸವು ನಮ್ಮೊಳಗಿನ ತುಡಿತದಿಂದ ಬಂದಿರಬೇಕು. ಆಗಲೇ ಅದು ಯಶಸ್ವಿಯಾಗುತ್ತದೆ. ಅದಕ್ಕೆ ಈ ಚಿತ್ರವೇ ಉದಾಹರಣೆ ಎಂದು ಅವರು ಹೃತಿಕ್ ಹೃದಯಾಳದ ಮಾತು ಬಿಚ್ಚಿದ್ದಾರೆ.
ಅಂದಹಾಗೆ, ಜಿಂದಗೀ ನಾ ಮಿಲೇಗಿ ದೊಬಾರಾ ಚಿತ್ರದಲ್ಲಿ ಅಭಯ್ ಡಿಯೊಲ್, ಫರ್ಹಾನ್ ಅಖ್ತರ್, ಕತ್ರೀನಾ ಕೈಫ್ ಮತ್ತು ಕಲ್ಕಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2011ರಲ್ಲಿ ಬಿಡುಗಡೆಗೊಂಡ ಈ ಚಿತ್ರವನ್ನು ಜೋಯಾ ಅಖ್ತರ್ ನಿರ್ದೇಶಿಸಿದ್ದರು. ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ನಿರ್ಮಾಣ ಮಾಡಿದ್ದರು.